ನೇಹಾ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರಕ್ಕೆ ಸರಿಯಾಗಿ ತನಿಖೆ ಮಾಡಲಾಗದಿದ್ದರೆ ಸಿಬಿಐಗೆ ಕೊಡಿ : ಅಮಿತ್ ಶಾ
screengrab : x@AmitShah
ಬೆಳಗಾವಿ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರಕ್ಕೆ ಸರಿಯಾಗಿ ತನಿಖೆ ಮಾಡಲು ಆಗದಿದ್ದರೆ ಸಿಬಿಐಗೆ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಶುಕ್ರವಾರ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಅವರು, ನೇಹಾ ಪ್ರಕರಣವನ್ನು ಭಾಷಣದಲ್ಲಿ ಉಲ್ಲೇಖಿಸಿದರು.
ನೇಹಾ ಹಿರೇಮಠ ಕೇಸ್ ವೈಯಕ್ತಿಕ ವಿಚಾರ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಇದು ವೈಯಕ್ತಿಕ ಅಲ್ಲ. ಮತಾಂತರ ಆಗದ್ದಕ್ಕೆ ಕೊಲೆಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ರಾಮಮಂದಿರ ನಿರ್ಮಾಣ ವಿಚಾರವನ್ನು ವಿಳಂಬ ಮಾಡಿತು. ಮೋದಿ ಅವರು ಕೇಸು ಗೆದ್ದು, ಭೂಮಿಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಿದರು. ರಾಹುಲ್ ಬಾಬಾ, ಸೋನಿಯಾ ಗಾಂಧಿ, ಖರ್ಗೆಯವರಿಗೆ ಆಮಂತ್ರಣ ಪತ್ರ ಇದ್ದರೂ ಅವರು ಗೈರು ಹಾಜರಾದರು. ಮತಬ್ಯಾಂಕ್ಗಾಗಿ ಈ ನಿರ್ಧಾರ ಮಾಡಿದ್ದಾರೆ. ಇವರಿಗೆ ಮತ ಕೊಡಲು ಸಾಧ್ಯವೇ? ಎಂದು ಕೇಳಿದರು.
ಕಾಶಿ ವಿಶ್ವನಾಥ ಮಂದಿರವನ್ನು ಔರಂಗಬೇಬ ಹಾಳು ಮಾಡಿದ್ದ. ಕಾಶಿ ಕಾರಿಡಾರ್, ಸೋಮನಾಥ ಮಂದಿರ ಮೊದಲಾದ ಕೆಲಸಗಳನ್ನು ಮೋದಿಜೀ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ತುಷ್ಟೀಕರಣಕ್ಕಾಗಿ ಈ ಎಲ್ಲ ವಿಚಾರಗಳನ್ನು ಕಡೆಗಣಿಸಿತ್ತು. ಖರ್ಗೆಯವರು ನಮಗೆ ಕಾಶ್ಮೀರದ ಜೊತೆಗೇನು ಸಂಬಂಧ ಎನ್ನುತ್ತಾರೆ. ಆದರೆ, ಇಲ್ಲಿನ ಜನತೆ ಕಾಶ್ಮೀರಕ್ಕಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧರಿದ್ದಾರೆ ಎಂದು ಹೇಳಿದರು.
ರಾಹುಲ್ ಬಾಬಾ ಸಂಸತ್ತಿನಲ್ಲಿ ಆಗ ಮಾತನಾಡಿ, 370ನೆ ವಿಧಿ ರದ್ದು ಮಾಡಿದರೆ ರಕ್ತದ ನದಿ ಹರಿಯುತ್ತದೆ ಎಂದಿದ್ದರು. 5ವರ್ಷ ಕಳೆದರೂ ಏನೂ ಸಮಸ್ಯೆ ಆಗಿಲ್ಲ. ಮೋದಿ ಅವರು ದೇಶವನ್ನು ಬಾಧಿಸುತ್ತಿದ್ದ ಭಯೋತ್ಪಾದಕತೆಯಿಂದ ಮುಕ್ತಿ ಕೊಟ್ಟಿದ್ದಾರೆ; ಪಿಎಫ್ಐ ನಿಷೇಧಿಸಿದ್ದಾರೆ ಎಂದು ತಿಳಿಸಿದರು.
ರಾಹುಲ್ ಬಾಬಾ ಕಂಪೆನಿಯಿಂದ ದೇಶವನ್ನು ಸುರಕ್ಷಿತವಾಗಿ ಇಡಲು ಸಾಧ್ಯವಿಲ್ಲ. ಮೋದಿಜೀ ಅವರ ಅವಧಿಯಲ್ಲಿ ದೇಶ ಸುರಕ್ಷಿತವಾಗಿತ್ತು, ಸಮೃದ್ಧ ದೇಶವಾಗಿ ಭಾರತ ಹೊರಹೊಮ್ಮಿದೆ. ಸೋನಿಯಾ ಗಾಂಧಿ, ರಾಹುಲ್, ಮನಮೋಹನ್ ಸಿಂಗ್ ಸರಕಾರ ಇದ್ದಾಗ ಬಾಂಬ್ ಸ್ಫೋಟ, ಭಯೋತ್ಪಾದನೆ ನಿರಂತರವಾಗಿ ನಡೆದಿತ್ತು ಎಂದು ಅವರು ವಿವರಿಸಿದರು.
‘ರಾಹುಲ್ ಬಾಬಾ ಅಮೇಥಿಯಿಂದ ರಾಯಬರೇಲಿಗೆ ಓಡಿದ್ದಾರೆ. ರಾಹುಲ್ಗೆ ಸೋಲು ಖಚಿತ. ಕೋವಿಡ್ ಲಸಿಕೆಯನ್ನು ಮೋದಿ ಲಸಿಕೆ ಎಂದು ರಾಹುಲ್ ಬಾಬಾ ಹೇಳಿದ್ದರು. ಅಲ್ಲದೆ ಸದ್ದಿಲ್ಲದೆ ರಾತ್ರಿ ಲಸಿಕೆ ಹಾಕಿಸಿಕೊಂಡಿದ್ದರು’ ಎಂದು ಹೇಳಿದರು.