ದಿನವೂ ಶಾಲೆಗೆ ಬಂದ ಮಕ್ಕಳಿಗೆ ಬೆಳಗಾವಿಯಿಂದ ಹೈದರಾಬಾದ್ ಗೆ ವಿಮಾನಯಾನ ಭಾಗ್ಯ!
ಹಾಜರಾತಿ ಹೆಚ್ಚಳಕ್ಕೆ ಬೆಳಗಾವಿ ಸೋನಟ್ಟಿ ಸರಕಾರಿ ಶಾಲಾ ಶಿಕ್ಷಕ ಪ್ರಕಾಶ ದೇಯಣ್ಣಯವರ ವಿಶೇಷ ಪ್ರಯತ್ನ
ಬೆಳಗಾವಿ: ಬೆಳಗಾವಿ ತಾಲೂಕಿನ ಸೋನಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಾಜರಾತಿ ವಿರಳವಾಗಿತ್ತು. ಅದೆಷ್ಟೇ ಪ್ರಯತ್ನಪಟ್ಟರೂ ಇದನ್ನು ಸರಿಪಡಿಸುವುದು ಸಾಧ್ಯವಾಗಿರಲಿಲ್ಲ. ಹೀಗಿರುವಾಗ ಈ ಶಾಲೆಯ ಶಿಕ್ಷಕ ಪ್ರಕಾಶ ದೇಯಣ್ಣಯವರ ವಿಶೇಷ ಪ್ರಯೋಗ ಮಾಡಿದರು. ಶಾಲೆಗೆ ಹೆಚ್ಚು ಹಾಜರಾತಿ ನೀಡುವವರನ್ನು ವಿಮಾನದ ಮೂಲಕ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಹೇಳಿದ್ದರು. ಪ್ರಕಾಶ ದೇಯಣ್ಣಯವರ ಪ್ರಯತ್ನ ಫಲ ನೀಡಿತು. ಒಂದರಿಂದ ಏಳನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಶಾಲೆಗೆ ಪ್ರತಿದಿನವೂ ತಪ್ಪದೇ ಬರುವುದಾಗಿ ಹೇಳಿ, ಆ ಮಾತನ್ನು ಉಳಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಈ ಕುಗ್ರಾಮದ ಮಕ್ಕಳ ವಿಮಾನಯಾನ ಕನಸನ್ನು ಪ್ರಕಾಶ ದೇಯಣ್ಣಯವರ ನನಸಾಗಿಸುವ ಮೂಲಕ ಮಾದರಿಯಾಗಿದ್ದಾರೆ.
ಕೊಟ್ಟ ಮಾತಿನಂತೆ ನವೆಂಬರ್ ಏಳರಂದು ಶಾಲೆಯ 17 ಮಕ್ಕಳನ್ನು ಬೆಳಗಾವಿಯಿಂದ ಹೈದರಾಬಾದ್ ಗೆ ಕರೆದೊಯ್ದಿದ್ದಾರೆ. ಇವರ ಜೊತೆಗೆ ಮೂವರು ಶಿಕ್ಷಕರು ಮತ್ತು ಎಸ್ ಡಿಎಂಸಿ ಅಧ್ಯಕ್ಷರನ್ನು ಕರೆದೊಯ್ದಿದ್ದಾರೆ. ಇವರೆಲ್ಲರನ್ನು ಹೈದರಾಬಾದ್ ನ ರಾಮೋಜಿ ರಾವ್ ಫಿಲ್ಮ್ ಸಿಟಿ, ಚಾರ್ ಮಿನಾರ್, ಸ್ನೊ ವರ್ಲ್ಡ್, ಸಲಾರ್ ಜಂಗ್ ವಸ್ತು ಸಂಗ್ರಹಾಲಯ ಗೋಲ್ಕೊಂಡ ಕೋಟೆಯನ್ನು ಸುತ್ತಾಡಿಸಿ ಗ್ರಾಮಕ್ಕೆ ಮರಳಿ ಕರೆ ತಂದಿದ್ದಾರೆ.
ನಾಲ್ಕು ತಿಂಗಳ ವೇತನ ವಿನಿಯೋಗ
ಈ ವಿಮಾನ ಪ್ರವಾಸಕ್ಕೆ ಪ್ರಕಾಶ ದೇಯಣ್ಣಯವರ ಅವರು ತಮ್ಮ ನಾಲ್ಕು ತಿಂಗಳ ವೇತನದ ಒಟ್ಟು 2.10 ಲಕ್ಷ ರೂ.ವನ್ನು ವಿನಿಯೋಗಿಸಿದ್ದಾರೆ. ಮಕ್ಕಳು ಸೇರಿ ಒಟ್ಟು 21 ಜನರ ವಿಮಾನಯಾನ, ಊಟ, ವಸತಿ ವೆಚ್ಚವನ್ನೆಲ್ಲ ಅವರೇ ಭರಿಸಿದ್ದಾರೆ.
‘ಸೋನಟ್ಟಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ವಿರಳವಾಗಿತ್ತು. ಎಷ್ಟೇ ಪ್ರಯತ್ನಿಸಿದರೂ ಹಾಜರಾತಿ ಹೆಚ್ಚಳ ಸಾಧ್ಯವಾಗಿರಲಿಲ್ಲ. ಮಕ್ಕಳನ್ನು ಪಾಲಕರು ತಮ್ಮೊಂದಿಗೆ ಕೆಲಸದ ಸ್ಥಳಗಳಿಗೆ ಕರೆದೊಯ್ಯುದ್ದರು. ಇದು ಈ ಸಮಸ್ಯೆಯ ಮೂಲ ಕಾರಣವಾಗಿತ್ತು. ಅದಕ್ಕಾಗಿ ನಾನು ಈ ಪ್ರವಾಸದ ಉಪಾಯ ಮಾಡಿದೆ. ಅದು ಫಲ ನೀಡಿದೆ. ಕೊಟ್ಟ ಮಾತಿನಂತೆ ಮಕ್ಕಳನ್ನು ವಿಮಾನ ಪ್ರಯಾಣ ಮಾಡಿಸಿದ್ದೇನೆ’ ಎಂದು ಶಿಕ್ಷಕ ಪ್ರಕಾಶ ದೇಯಣ್ಣವರ ಸಂತಸದಿಂದ ಹೇಳುತ್ತಾರೆ.
ಬೆಳಗಾವಿಯಿಂದ 11 ಕಿ.ಮೀ. ದೂರದಲ್ಲಿರುವ ಸೋನಟ್ಟಿ ಗ್ರಾಮದಲ್ಲಿಲ್ಲಿ ಪರಿಶಿಷ್ಟ ಪಂಗಡದವರು ಮಾತ್ರ ಇದ್ದಾರೆ.