ಉತ್ತರ ಕರ್ನಾಟಕದ ಜನರ ಬಗ್ಗೆ ನಮ್ಮ ಬದ್ಧತೆ ಪ್ರಶ್ನಿಸುವಂತಿಲ್ಲ : ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಳಗಾವಿ : ಉತ್ತರ ಕರ್ನಾಟಕದ ಜನರ ಬಗ್ಗೆ ನಮ್ಮ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಈ ಭಾಗದ ಜನರ ಬಗ್ಗೆ ನನಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿದೆ. ಉತ್ತರ ಕರ್ನಾಟಕದ ಜನ ಕರ್ನಾಟಕವನ್ನು ಕಟ್ಟುವುದರಲ್ಲಿ ವಿಶೇಷವಾದ ಪಾತ್ರವನ್ನು ವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುವರ್ಣ ವಿಧಾನಸೌಧದ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಗೆ ಸರಕಾರ ಪರವಾಗಿ ಅವರು ಉತ್ತರ ನೀಡಿದರು.
ಕಲಬುರಗಿ ಮತ್ತು ಬೆಳಗಾವಿ ವಿಭಾಗಗಳಲ್ಲಿ ಒಟ್ಟು 14 ಜಿಲ್ಲೆಗಳು, 101 ತಾಲ್ಲೂಕುಗಳು, 321 ಹೋಬಳಿಗಳಿವೆ. ಈಗ ಸುಮಾರು 2.96 ಕೋಟಿ ಜನಸಂಖ್ಯೆ ಈ ಭಾಗದಲ್ಲಿ ವಾಸವಿದೆ. 59.04 ಕುಟುಂಬಗಳ ಬಳಿ ಬಿಪಿಎಲ್ ಕಾರ್ಡುಗಳಿವೆ. 2011ರ ಜನಗಣತಿಯಲ್ಲಿ ಸಂಗ್ರಹಿಸಿದ ಮಾಹಿತಿ ಪ್ರಕಾರ ರಾಜ್ಯದ ಪುರುಷರ ಸರಾಸರಿ ಸಾಕ್ಷರತೆಯ ಪ್ರಮಾಣ ಶೇ.81.30, ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ.65.72ರಷ್ಟಿದೆ ಎಂದು ಅವರು ಹೇಳಿದರು.
ಉತ್ತರ ಕರ್ನಾಟಕದ ಸರಾಸರಿ ಪುರುಷರ ಸಾಕ್ಷರತೆಯ ಪ್ರಮಾಣ ಶೇ.79.12 ಹಾಗೂ ಮಹಿಳೆಯರ ಸಾಕ್ಷರತೆಯ ಪ್ರಮಾಣ ಶೇ. 60.60 ರಷ್ಟಿದೆ.
2019-21 ರವರೆಗಿನ ಸರ್ವೆ ಪ್ರಕಾರ ರಾಜ್ಯದ ಮಹಿಳೆಯರ ಸರಾಸರಿ ಅನಿಮಿಯಾ ಪ್ರಮಾಣ ಶೇ.48.21ರಷ್ಟು ಮತ್ತು ಉತ್ತರ ಕರ್ನಾಟಕದ ಮಹಿಳೆಯರ ಅನಿಮಿಯಾ ಪ್ರಮಾಣ ಶೇ.53.41 ರಷ್ಟು.
2019-21 ರವರೆಗಿನ ಸರ್ವೆ ಪ್ರಕಾರ ರಾಜ್ಯದ ಮಕ್ಕಳ ಸರಾಸರಿ ಅನಿಮಿಯಾ ಪ್ರಮಾಣ ಶೇ.64.55 ರಷ್ಟಿದ್ದರೆ ಮತ್ತು ಉತ್ತರ ಕರ್ನಾಟಕದ ಮಕ್ಕಳ ಅನಿಮಿಯಾ ಪ್ರಮಾಣ ಶೇ.69.79 ರಷ್ಟು ಎಂದು ಅವರು ಮಾಹಿತಿ ನೀಡಿದರು.
ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ನಂಜುಂಡಪ್ಪ ವರದಿಯ ಪ್ರಕಾರ 2007-08 ರಿಂದ 2023-24 ರವರೆಗೆ 35 ಸಾವಿರ ಕೋಟಿಗೂ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಅದರಲ್ಲಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ 17,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲವೆಂದು ಬಹುಪಾಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಿಂದ ಕಳೆದ ಬಾರಿ ಇದೇ ಸದನದಲ್ಲಿ ಘೋಷಣೆ ಮಾಡಿದಂತೆ 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಡಾ.ಗೊವಿಂದರಾವ್ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿಯೊಂದನ್ನು ರಚಿಸಲಾಗಿದೆ. ಸದರಿ ಸಮಿತಿಯು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಈ ಸಮಿತಿ ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14 ರಿಂದ ಇದುವರೆಗೆ 19,878 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ. 13,229 ಕೊಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ 11,500 ಕೋಟಿ ಖರ್ಚು ಮಾಡಲಾಗಿದೆ. ಮಂಡಳಿಯು ಬಿಡುಗಡೆಯಾದ ಅನುದಾನಕ್ಕೆ ಶೇ.85ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದು ಸಿದ್ದರಾಮಯ್ಯ ನುಡಿದರು.
ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ 1,09,416 ಹುದ್ದೆಗಳನ್ನು ನೇರ ನೇಮಕಾತಿಗೆ ಗುರುತಿಸಿದ್ದು, 79,985 ಹುದ್ದೆಗಳು ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 38,705 ಹುದ್ದೆಗಳ ಪೈಕಿ 29,793 ಜನರಿಗೆ ಮುಂಬಡ್ತಿ ಭಾಗ್ಯ ನೀಡಲಾಗಿದೆ. ಇನ್ನು ಖಾಲಿ ಉಳಿದ ನೇರ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸಕ್ತ 2024-25ನೇ ಸಾಲಿನ ಆಯವ್ಯಯದಲ್ಲಿ ದಾಖಲೆ ಪ್ರಮಾಣದಲ್ಲಿ 5,000 ಕೋಟಿ ರೂ. ಘೋಷಿಸಿ ಅನುದಾನ ಹಂಚಿಕೆ ಮಾಡಲಾಗಿದೆ. ಮಂಡಳಿಯ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಶಾಖಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು 262.20 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಈಗಾಗಲೆ ಅನುಮೋದನೆ ನೀಡಿದ್ದು, ಅಂತಿಮ ಘಟ್ಟದ ಕೆಲಸ ಭರದಿಂದ ಸಾಗಿದೆ. ಶೀಘ್ರವೇ ಇದರ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತಾಂತ್ರಿಕ ನೆರವಿನೊಂದಿಗೆ ಕಲಬುರಗಿಯಲ್ಲಿ 221.52 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಯ ಮಕ್ಕಳ ಆರೋಗ್ಯ ಘಟಕ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ 90 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 72 ಕೋಟಿ ರೂ. ವೆಚ್ಚದಲ್ಲಿ 150 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಈ ಮೂರು ಆಸ್ಪತ್ರೆಗಳ ಕಾಮಗಾರಿಗೆ ಈ ವರ್ಷ 75 ಕೋಟಿ ರೂ. ಅನುದಾನ ನೀಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದಲ್ಲದೆ ಪ್ರಗತಿಯಲ್ಲಿರುವ 162.80 ಕೋಟಿ ರೂ. ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹ ಶೀಘ್ರ ಸಾರ್ವಜನಿಕರಿಗೆ ಬಳಕೆಗೆ ಬರಲಿದೆ. 30.14 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ ಮತ್ತು 15.57 ಕೋಟಿ ರೂ. ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಟ್ಟ ಗಾಯಗಳ ಘಟಕಕ್ಕೆ ಇತ್ತೀಚೆಗೆ ಅಡಿಗಲ್ಲು ಹಾಕಲಾಗಿದೆ. ಈ ಎಲ್ಲಾ ಆರೋಗ್ಯ ಸೇವೆಗಳಿಂದ ಈ ಪ್ರದೇಶದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಜೊತೆಗೆ ವೈದ್ಯಕೀಯ ಸವಲತ್ತುಗಳು ಮತ್ತಷ್ಟು ಸರಳವಾಗಿ ಕೈಗೆಟುಕಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕದ ಭಾಗದ ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಇತರೆ ಭಾಗದಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2023-24ನೇ ಶೈಕ್ಷಣಿಕ ಸಾಲಿನ ವರೆಗೆ ಪ್ರಮುಖವಾಗಿ 7,757 ಅಭ್ಯರ್ಥಿಗಳು ವೈದ್ಯಕೀಯ, 25,683 ಅಭ್ಯರ್ಥಿಗಳು ಇಂಜಿನಿಯರಿಂಗ್ ಪ್ರವೇಶಾತಿ ಪಡೆದಿದ್ದಾರೆ. ಇದಲ್ಲದೆ ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬಂಧಿತ, ಬಿ.ಫಾರ್ಮಸಿ/ ಡಿ.ಫಾರ್ಮಸಿ ಕೋರ್ಸುಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದರು.
ಪ್ರದೇಶದಲ್ಲಿನ ಅನಕ್ಷರತೆಯನ್ನು ಹೋಗಲಾಡಿಸಿ ಸಾಕ್ಷರತೆ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಶಿಕ್ಷಣ ಗುಣಮಟ್ಟ ಕಾಪಾಡಲು, ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹೆಚ್ಚಳ ಹಾಗೂ ವಸತಿ ನಿಲಯ ಕಟ್ಟಡ ನಿರ್ಮಾಣ ಹೀಗೆ ಅನೇಕ ಶೈಕ್ಷಣಿಕ ಚಟುವಟಿಕೆಗಳಿಗೆ ಒಟ್ಟಾರೆ 2013-14 ರಿಂದ 2023-24ರ ವರೆಗೆ ಒಟ್ಟಾರೆ 4,352 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
2023-24ನೇ ವರ್ಷದಲ್ಲಿ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ 652.50 ಕೋಟಿ ರೂ. ಅನುದಾನ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಖರ್ಚು ಮಾಡಲಾಗಿದೆ. ಈ ಅನುದಾನದಲ್ಲಿ ಶಾಲೆಗಳ ದುರಸ್ಥಿ ಮತ್ತು ನಿರ್ಮಾಣ, ಹೆಚ್ಚುವರಿ ಕೋಣೆ ನಿರ್ಮಾಣ, ಪೀಠೋಪಕರಣ, ವಿದ್ಯುತೀಕರಣ, ಶೌಚಾಲಯ ನಿರ್ಮಾಣ, ಗ್ರಂಥಾಲಯ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಭಾಗದಲ್ಲಿ ಆರೋಗ್ಯ ಕೇಂದ್ರ ನಿರ್ಮಾಣ, ತಾಲೂಕು-ಜಿಲ್ಲಾ ಆಸ್ಪತ್ರೆ ನಿರ್ಮಾಣ, ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಲಕರಣೆ ಪೂರೈಕೆಗೆ 2013-14 ರಿಂದ 2023-24ರ ವರೆಗೆ ಸುಮಾರು 915.50 ಕೋಟಿ ರೂ. ಅನುದಾನ ಒದಗಿಸಿದೆ ಎಂದು ಅವರು ವಿವರಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಆಲಮಟ್ಟಿ ಅಣೆಕಟ್ಟನ್ನು 519 ಮೀಟರುಗಳಿಂದ 524.256 ಮೀಟರುಗಳಿಗೆ ಹೆಚ್ಚಿಸಿದರೆ ನೀರು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಿದಾಗ ಒಟ್ಟಾರೆ 75,563 ಎಕರೆ ಭೂಮಿಯ ಅಗತ್ಯವಿದೆ. ಆದರೆ ಇದುವರೆಗೆ ಕೇವಲ 2543 ಎಕರೆ ಭೂಮಿ ಮಾತ್ರ ಭೂಸ್ವಾಧೀನವಾಗಿದೆ. ಉಳಿಕೆ 73,020 ಭೂಮಿಯನ್ನು ಈಗ ಭೂ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ನಮ್ಮ ಸರಕಾರ ಒಂದೇ ಬಾರಿಗೆ ಮುಂದಿನ 3-4 ವರ್ಷಗಳಲ್ಲಿ ಭೂ ಸ್ವಾಧೀನ ಮಾಡಲು ಉದ್ದೇಶಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೆ ಹಂತಕ್ಕಾಗಿ ತೀರ್ಪು ಪ್ರಕಟಿಸಿ 11 ವರ್ಷಗಳು ಮುಗಿದವು. ಮೋದಿ ನೇತೃತ್ವದ ಬಿಜೆಪಿ ಸರಕಾರ ಇದುವರೆಗೆ ತೀರ್ಪಿನ ಕುರಿತು ಗೆಜೆಟ್ ಪ್ರಕಟಣೆ ಹೊರಡಿಸಿಲ್ಲ. ಗೆಜೆಟ್ ಪ್ರಕಟಣೆ ಹೊರಡಿಸದೆ ಕರ್ನಾಟಕಕ್ಕೆ ದ್ರೋಹ ಬಗೆಯಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.