ಬೆಳಗಾವಿ | ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಭವನ, ಫೋಟೋ ಗ್ಯಾಲರಿ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
Photo : x/CMofKarnataka
ಬೆಳಗಾವಿ : ಜಿಲ್ಲಾಡಳಿತ,ಜಿ.ಪಂ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ ಸ್ವಾತಂತ್ರ್ಯ ಯೋಧ ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನ ಹಾಗೂ ಫೋಟೋ ಗ್ಯಾಲರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಉದ್ಘಾಟಿಸಿದರು.
ನಂತರ ಮುಖ್ಯಮಂತ್ರಿಗಳು ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನದಲ್ಲಿ ಅಳವಡಿಸಲಾಗಿರುವ ಫೋಟೋ ಗ್ಯಾಲರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷರು ಹಾಗೂ ಸಚಿವರಾದ ಎಚ್.ಕೆ.ಪಾಟೀಲ್, ಸಚಿವರುಗಳಾದ ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ, ದಿನೇಶ್ ಗುಂಡೂರಾವ್, ಭೈರತಿ ಸುರೇಶ, ಶಾಸಕರಾದ ಅಶೋಕ್ ಪಟ್ಟಣ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಸ್ಮಾರಕ ಭವನ ಅಂದಾಜು 15 ಗುಂಟೆ ಜಾಗದಲ್ಲಿ 1.58 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸ್ಥಳದಲ್ಲಿ ಸ್ಮಾರಕ ಭವನ, ದೇಶಪಾಂಡೆ ಅವರ ಪುತ್ಥಳಿ, ಪೋಟೊ ಗ್ಯಾಲರಿ, ಕಾಂಪೌಂಡ್, ತಂತಿಬೇಲಿ, ಪೇವರ್ಸ್ ಹಾಗೂ ಉದ್ಯಾನ ನಿರ್ಮಿಸಲಾಗಿದೆ.