ಕಾಂಗ್ರೆಸ್ ಪಕ್ಷವು ಕುಟುಂಬವಾದದಲ್ಲಿ ದೇಶದ ಹಿತವನ್ನು ಮರೆತಿದೆ : ಪ್ರಧಾನಿ ಮೋದಿ
"ಕರ್ನಾಟಕದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ"
Screengrab : x/@narendramodi
ಬೆಳಗಾವಿ : ಕಾಂಗ್ರೆಸ್ ಪಕ್ಷವು ಕುಟುಂಬವಾದದಲ್ಲಿ ದೇಶದ ಹಿತವನ್ನು ಮರೆತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
"ಕೋವಿಡ್ ಅವಧಿಯಲ್ಲಿ ಲಸಿಕೆಯನ್ನು ಬಿಜೆಪಿ ಲಸಿಕೆ ಎಂದು ಕಾಂಗ್ರೆಸ್ಸಿಗರು ಟೀಕಿಸಿ ವಿರೋಧಿಸಿದ್ದರು. ಜನರನ್ನು ಗೊಂದಲದಲ್ಲಿ ಸಿಲುಕಿಸಿದ ಅವರು, ಇವಿಎಂ ವಿಚಾರದಲ್ಲಿ ಕೂಡ ಸುಳ್ಳು ಹೇಳಿ ಗೊಂದಲ ಮೂಡಿಸಿದ್ದರು. ಸುಪ್ರೀಂ ಕೋರ್ಟ್ ಕೆಲದಿನಗಳ ಹಿಂದೆ ಇವಿಎಂ ವಿಷಯದಲ್ಲಿ ಸ್ಪಷ್ಟ ಆದೇಶ ನೀಡಿದೆ" ಎಂದು ವಿವರಿಸಿದರು.
"ಬಿಜೆಪಿ- ಎನ್ಡಿಎ ಸರಕಾರವು ಕಳೆದ 10 ವರ್ಷಗಳಲ್ಲಿ ಭಾರತೀಯ ನ್ಯಾಯ ಸಂಹಿತಾ ಮೂಲಕ ಆಂಗ್ಲರ ಮುಷ್ಟಿಯಿಂದ ಜನರನ್ನು ಹೊರತಂದಿದೆ. ಗುಲಾಮಿ ಪದ್ಧತಿಯಿಂದ ಭಾರತೀಯರನ್ನು ಹೊರಕ್ಕೆ ತರಲಾಗಿದೆ ಎಂದು ವಿವರಿಸಿದರು. ಜನರಿಗೆ ನ್ಯಾಯ ನೀಡಲು ಪೂರಕ ಕಾನೂನು ಇದು. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಇದೆ. ಶೀಘ್ರವೇ ಇದು ಜಾರಿಯಾಗಲಿದೆ" ಎಂದು ಹೇಳಿದರು.
"ಕರ್ನಾಟಕದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆ, ಬೆಳಗಾವಿಯಲ್ಲಿ ನಡೆದ ಮಹಿಳೆಯ ಮೇಲಿನ ದೌರ್ಜನ್ಯವನ್ನು ಪ್ರಸ್ತಾಪಿಸಿದ ಅವರು, ಹುಬ್ಬಳ್ಳಿಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಹತ್ಯೆಯಿಂದ ದೇಶದಲ್ಲೇ ಆತಂಕ ಮೂಡಿದೆ. ಕಾಂಗ್ರೆಸ್ ಸರಕಾರವು ತುಷ್ಟೀಕರಣದ ಕಡೆ ಗಮನ ಕೊಡುತ್ತಿದೆ. ನೇಹಾ ಕುರಿತು ಕಾಂಗ್ರೆಸ್ಸಿಗರಿಗೆ ಕಳಕಳಿ ಇಲ್ಲ ಎಂದು ಟೀಕಿಸಿದರು. ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ" ಎಂದು ವಾಗ್ದಾಳಿ ನಡೆಸಿದರು.
ʼಸ್ವಾತಂತ್ರ್ಯ ಚಳವಳಿಯನ್ನು ಮತಬ್ಯಾಂಕಿಗಾಗಿ ತುಷ್ಟೀಕರಣದ ಚರಿತ್ರೆಯಾಗಿ ಮಾಡಿದ ಪಕ್ಷ ಕಾಂಗ್ರೆಸ್. ಭಾರತದ ಮಹಾರಾಜರು ಅತ್ಯಾಚಾರಿಗಳು, ಬಡವರ ಜಮೀನನ್ನು ಕಿತ್ತುಕೊಂಡವರೆಂದು ಚರಿತ್ರೆ ಬರೆಸಿದ್ದರು. ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮರ ಅವಮಾನ ಮಾಡಿದ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು. ನಿಜವಾಗಿ ನವಾಬರು, ನಿಜಾಮರು, ಸುಲ್ತಾನರು ಅತ್ಯಾಚಾರ ಮಾಡಿದವರುʼ ಎಂದು ವಿವರಿಸಿದರು.
"ಕಾಂಗ್ರೆಸ್ಸಿಗೆ ಔರಂಗಜೇಬನ ಅತ್ಯಾಚಾರ, ಮಂದಿರಗಳ ಧ್ವಂಸ ಮಾಡಿದ್ದು ನೆನಪಿಗೆ ಬರುವುದಿಲ್ಲ. ದೇಗುಲಗಳನ್ನು ಅವಮಾನ ಮಾಡುವವರ ಜೊತೆ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ. ಭಾರತದ ವಿಭಜನೆಯಲ್ಲಿ ದೊಡ್ಡ ಪಾತ್ರ ವಹಿಸಿದವರನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ. ಕಾಂಗ್ರೆಸ್ಸಿನ ತುಷ್ಟೀಕರಣ ನೀತಿ ಅವರ ಪ್ರಣಾಳಿಕೆಯಲ್ಲೂ ವಿವರವಾಗಿ ಹೊರಬಂದಿದೆ" ಎಂದು ಟೀಕಿಸಿದು.
ʼಬಿಜೆಪಿ- ಎನ್ಡಿಎ ಸರಕಾರವು ಸ್ವಸಹಾಯ ಗುಂಪು, ಕೃಷಿ ಉತ್ಪಾದನಾ ಸಂಘಗಳಿಗೆ ಬೆಂಬಲ ನೀಡಿದೆ. 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳ ಪ್ರಯೋಜನ ಪಡೆದಿದ್ದಾರೆ. ಇಂಧನದಲ್ಲಿ ಎಥೆನಾಲ್ ಸೇರ್ಪಡೆಯಿಂದ ಕೃಷಿಕರಿಗೆ ಪ್ರಯೋಜನವಾಗಿದೆ. ಆದರೆ, ಕಾಂಗ್ರೆಸ್ ಪಕ್ಷವು ರೈತದ್ರೋಹಿಯಾಗಿದೆ. ಇಲ್ಲಿ ಬಿಜೆಪಿ ಸರಕಾರ ಇದ್ದಾಗ ರೈತರ ಖಾತೆಗೆ 10 ಸಾವಿರ ಸಿಗುತ್ತಿತ್ತು. 4 ಸಾವಿರವನ್ನು ಕಾಂಗ್ರೆಸ್ ಸರಕಾರ ಕಡಿತಗೊಳಿಸಿದೆ ಎಂದು ತಿಳಿಸಿದರು. ಆದರೆ, ರೈತರಿಗೆ 6 ಸಾವಿರ ಮುಂದುವರೆಯಲಿದೆ" ಎಂದು ಭರವಸೆ ನೀಡಿದರು.
"ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿ ಹೊಸ ನೀತಿ ತರಲು ಕಾಂಗ್ರೆಸ್ ಮುಂದಾಗಿದೆ. ಮಕ್ಕಳಿಗಾಗಿ ಶೇಖರಿಸಿಟ್ಟ ಹಣ, ಆಸ್ತಿಯನ್ನು ನೀವು ಅವರಿಗೆ ಕೊಡಲು ಸಾಧ್ಯವಾಗದು. ಅದನ್ನು ಮಕ್ಕಳಿಗೆ ಕೊಡಲು ಶೇ 55ರಷ್ಟು ತೆರಿಗೆ ಪಾವತಿಸಲು ಕಾಂಗ್ರೆಸ್ ಕೇಳಲಿದೆ. ಅದನ್ನು ಮತಬ್ಯಾಂಕಿಗೆ ಹಂಚಲು ನಿಮ್ಮ ಸಂಪತ್ತಿನ ಡಕಾಯಿತಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಇದನ್ನು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ" ಎಂದು ತಿಳಿಸಿದರು.
"ಕರ್ನಾಟಕದ ಜನರ ಆಶೀರ್ವಾದ ಕೇಳಲು ಬಂದಿದ್ದೇನೆ. ಜಗದೀಶ್ ಶೆಟ್ಟರ್, ಅಣ್ಣಾಸಾಹೇಬ ಜೊಲ್ಲೆ ಅವರನ್ನು ಗರಿಷ್ಠ ಮತದಿಂದ ಚುನಾಯಿಸಿ ಎಂದು ಹೇಳಿದರು. ಕಮಲದ ಚಿಹ್ನೆಗೆ ನೀಡಿದ ಮತವು ಮೋದಿಯವರಿಗೆ ಹೋಗಲಿದೆ. ಮೋದಿಯವರನ್ನು ಸಶಕ್ತಗೊಳಿಸಲು ಬಿಜೆಪಿಗೆ ಮತದಾನ ಮಾಡಿ ಎಂದು ವಿನಂತಿಸಿದರು. ಪ್ರತಿ ಬೂತ್ನಲ್ಲಿ ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ" ಎಂದು ತಿಳಿಸಿದರು.