ದಲಿತರು ಯಾವುದೇ ಪಕ್ಷದಲ್ಲಿ ಸಿಎಂ ಆಗಲು ಸಾಧ್ಯವಾಗಿಲ್ಲ: ಸಚಿವ ಸತೀಶ್ ಜಾರಕಿಹೊಳಿ
"ದಲಿತ ಮುಖ್ಯಮಂತ್ರಿ ಕೂಗು ಮಲ್ಲಿಕಾರ್ಜುನ ಖರ್ಗೆಯವರಿಂದ ಆರಂಭವಾಗಿದೆ"
ಬೆಳಗಾವಿ: ದಲಿತ ಸಮುದಾಯದ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಇಂದು, ನಿನ್ನೆದಲ್ಲ. ಈ ಕೂಗು ಮಲ್ಲಿಕಾರ್ಜುನ ಖರ್ಗೆಯವರಿಂದ ಆರಂಭವಾಗಿದ್ದು, ಈ ಬೇಡಿಕೆ ಕಾಂಗ್ರೆಸ್ ಪಕ್ಷದಲ್ಲಷ್ಟೇ ಅಲ್ಲ. ಬಿಜೆಪಿ, ಜೆಡಿಎಸ್‍ನಲ್ಲೂ ಇದೆ. ಆದರೆ ಇದುವರೆಗೆ ದಲಿತರು ಯಾವುದೇ ಪಕ್ಷದಲ್ಲಿ ಸಿಎಂ ಆಗಲು ಸಾಧ್ಯವಾಗಿಲ್ಲ’ ಎಂದು ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 20 ವರ್ಷದಿಂದ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಜಿ.ಪರಮೇಶ್ವರ್ ಸಿಎಂ ಆಗಬೇಕೆಂಬ ಕೂಗು ಇತ್ತು. ಆದರೆ ಅವರಿಬ್ಬರಿಗೂ ಸಿಎಂ ಆಗುವ ಭಾಗ್ಯ ಸಿಗಲಿಲ್ಲ. ನಾನು ಅನೇಕ ಸಮಾವೇಶಗಳಲ್ಲಿ ದಲಿತರು ಸಿಎಂ ಆಗಲೇಬೇಕೆಂದು ಹೇಳಿದ್ದೇನೆ ಎಂದು ಪ್ರತಿಪಾಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ. ನಮ್ಮ ಕಡೆ ಸೈನಿಕರು ಜಾಸ್ತಿ ಇದ್ದಾರೆ. ಸೈನಿಕರನ್ನು ಲೀಡ್ ಮಾಡುವ ಕ್ಯಾಪ್ಟನ್ ಇಲ್ಲ. ಕ್ಯಾಪ್ಟನ್ ಪಾತ್ರಗಳನ್ನು ರೆಡಿ ಮಾಡಬೇಕಿದೆ. ಹೈಕಮಾಂಡ್ ಎದುರು ಪ್ರಭಾವ ಬೀರುವಲ್ಲಿ ವಿಫಲರಾಗಿದ್ದೇವೆ ಎಂದು ಹೇಳಿದರು.
ಈ ಕುರಿತು ಲೋಕಸಭೆ ಚುನಾವಣೆ ನಂತರ ದಲಿತ ಸಿಎಂ ಬಗ್ಗೆ ದನಿ ಎತ್ತುತ್ತೇವೆ. ಈಗ ಲೋಕಸಭೆಯಲ್ಲಿ ಹೆಚ್ಚಿನ ಸೀಟು ಗೆಲ್ಲಲು ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷ ಅಷ್ಟೇ ಅಲ್ಲ. ಬಿಜೆಪಿಯಲ್ಲಿ ಗೋವಿಂದ ಕಾರಜೋಳ, ಜೆಡಿಎಸ್‍ನಲ್ಲಿ ಎಚ್.ಕೆ.ಕುಮಾರಸ್ವಾಮಿ ಅವರಿಗೂ ಸಿಎಂ ಆಗುವ ಅವಕಾಶ ಇತ್ತು. ಆದರೆ ಬಿಜೆಪಿ, ಜೆಡಿಎಸ್‍ನಲ್ಲೂ ದಲಿತ ನಾಯಕರು ಹೈಕಮಾಂಡ್ ಎದುರು. ಪ್ರಭಾವ ಬೀರುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ವಿಶ್ಲೇಷಿಸಿದರು.