ಬೆಳಗಾವಿ ಅಧಿವೇಶನ | ‘ಕಿತ್ತೂರು ಕರ್ನಾಟಕ’ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆಗೆ ಒತ್ತಾಯ
ಶಶಿಕಲಾ ಜೊಲ್ಲೆ
ಬೆಳಗಾವಿ : ‘ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ(ಕೆಕೆಆರ್ಡಿಬಿ) ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಭಾಗದ ಅಭಿವೃದ್ಧಿ ಮಂಡಳಿಯನ್ನು ರಚನೆ ಮಾಡಬೇಕು ಎಂದು ಬಿಜೆಪಿಯ ಹಿರಿಯ ಸದಸ್ಯೆ ಶಶಿಕಲಾ ಜೊಲ್ಲೆ ಇಂದಿಲ್ಲಿ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಬೆಳಗಾವಿಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಅತ್ಯಂತ ಹಿಂದುಳಿದಿದೆ. ಹೀಗಾಗಿ ಗಡಿ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚನೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಶಾಲಾ ಕೊಠಡಿಗಳ ದುರಸ್ತಿ ಮತ್ತು ನಿರ್ಮಾಣ, ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಸ್ಥಾಪಿಸಲು ಆದ್ಯತೆ ನೀಡಬೇಕು. ಗಡಿಭಾಗದಲ್ಲಿ ಕಲಿತ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ವಿಶೇಷ ಯೋಜನೆ ರೂಪಿಸಬೇಕು. ಆ ಮೂಲಕ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಸರಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದ ಜೊಲ್ಲೆ, ಶಾಲಾ ಶಿಕ್ಷಕರ ನೇಮಕ, ಮೂಲಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಪಾಲ್ಗೊಂಡಿದ್ದ ಕಾಂಗ್ರೆಸ್ ಐತಿಹಾಸಿಕ ಅಧಿವೇಶನದ ನೆನಪಿನಲ್ಲಿ ಅಧಿವೇಶನ ನಡೆಸುವುದು ಸ್ವಾಗತಾರ್ಹ. ಅದೇ ಮಾದರಿಯಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಕರಣವೊಂದರ ಬಗ್ಗೆ ನೂರು ವರ್ಷಗಳ ಹಿಂದೆ ಚಿಕ್ಕೋಡಿ ಕೋರ್ಟ್ನಲ್ಲಿ ವಾದ ಮಾಡಿದ್ದು, ನಿಪ್ಪಾಣಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ನೆನಪಿಗಾಗಿ ಡಿ.26ಕ್ಕೆ ರಾಜ್ಯ ಸರಕಾರ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಬೇಕು ಎಂದು ಶಶಿಕಲಾ ಜೊಲ್ಲೆ ಆಗ್ರಹಿಸಿದರು.