ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ : ಕೆ.ಎಚ್.ಮುನಿಯಪ್ಪ
ಬೆಳಗಾವಿ (ಸುವರ್ಣ ವಿಧಾನಸೌಧ) : ಗ್ರಾಮ ಪಂಚಾಯತ್ ಮಟ್ಟದಲ್ಲಿ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರಕಾರದ ಮಾನದಂಡಗಳ ಅಡಿಯಲ್ಲಿಯೇ ನಾವು ಪರಿಷ್ಕರಣೆ ಮಾಡಲು ಹೋಗಿದ್ದೆವು. ಆದರೆ, ಕೆಲವು ಗೊಂದಲಗಳಿಂದ ಅದನ್ನು ತಡೆಹಿಡಿದಿದ್ದೇವೆ ಎಂದರು.
ಅರ್ಹ ಬಿಪಿಎಲ್ ಪಡಿತರ ಕಾರ್ಡ್‍ದಾರರ ಯಾವುದೇ ಕಾರ್ಡ್‍ಗಳು ರದ್ದಾಗದಂತೆ ಅಧಿಕಾರಿಗಳಿಗೆ ಸೂಚಿಸಿ ರದ್ದಾದ ಬಿಪಿಎಲ್ ಕಾರ್ಡ್‍ಗಳನ್ನು ಪುನರ್ ಸ್ಥಾಪಿಸಲಾಗಿದೆ. ಆದರೂ, ಪ್ರಸ್ತುತ ಬಿಪಿಎಲ್ ಪಡಿತರ ಕಾರ್ಡ್‍ಗಳಲ್ಲಿ ಅನರ್ಹ ಫಲಾನುಭವಿಗಳ ಪತ್ತೆಹಚ್ಚಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ನಮ್ಮ ಅಧಿಕಾರಿಗಳು ಪರಿಪಕ್ವವಾದ ಅಂಕಿ ಅಂಶಗಳನ್ನು ಗುರುತಿಸಿ ನಂತರ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.
ಪ್ರಸ್ತುತ ಈಗಿರುವ ಬಿಪಿಎಲ್ ಕಾರ್ಡ್‍ಗಳಲ್ಲಿ ಶೇ.20ರಷ್ಟು ಕಾರ್ಡ್‍ಗಳು ಎಪಿಎಲ್‍ನವರು ಸೇರಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇದನ್ನು ಅತಿ ಶೀಘ್ರದಲ್ಲಿ ಪರಿಷ್ಕರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದು ಕೆ.ಎಚ್.ಮುನಿಯಪ್ಪ ತಿಳಿಸಿದರು.
ರಾಜ್ಯದಲ್ಲಿ ಸುಮಾರು ಶೇ.65ರಿಂದ ಶೇ.75ರಷ್ಟು ಜನಸಂಖ್ಯೆಗೆ ಬಡತನ ರೇಖೆಗಿಂತ ಕೆಳಗಿರುವಂತೆ ಕಾರ್ಡ್‍ಗಳನ್ನು ನೀಡಲಾಗಿದ್ದು, ಅದನ್ನು ಪರಿಷ್ಕರಿಸಿಲಾಗುತ್ತಿದ್ದು, ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಜವಾದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ತೊಂದರೆಯಾಗದಂತೆ ಜಾಗ್ರತೆ ವಹಿಸಿ ನೀಡಲಾಗುವುದು ಎಂದು ಕೆ.ಎಚ್.ಮುನಿಯಪ್ಪ ಹೇಳಿದರು.