ಬೆಳಗಾವಿ ಅಧಿವೇಶನ | ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಶೀಘ್ರವೇ ಟೆಂಡರ್ : ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಳಗಾವಿ : ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.
ಬುಧವಾರ ವಿಧಾನ ಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಬಿ.ಜಿ.ಪಾಟೀಲ್ ಅವರು ಕಲಬುರಗಿ ಮಲ್ಲಾಬಾದ್ ಏತ ನೀರಾವರಿ ಯೋಜನೆ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದು ಗಮನ ಸೆಳೆದ ಸೂಚನೆಗೆ ಅವರು ಉತ್ತರಿಸಿದರು.
ಬಸವರಾಜ ಬೊಮ್ಮಾಯಿ ಸರಕಾರದ ಬಜೆಟ್ ನಲ್ಲಿ ನೀರಾವರಿ ಇಲಾಖೆಗೆ 22ಸಾವಿರ ಕೋಟಿ ರೂ.ಅನುದಾನ ನೀಡಿದ್ದರು. ಆದರೆ ನಿಗಮಗಳಲ್ಲಿ 28 ಸಾವಿರ ಕೋಟಿ ರೂ. ಮೊತ್ತದ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆಲಸ ಮಾಡಿಸಿ ಬಿಲ್ ಪಾವತಿ ಮಾಡದಿದ್ದರೆ ಅನಗತ್ಯ ಒತ್ತಡ ಬೀಳಲಿದೆ. ಕೇಂದ್ರ ಸರಕಾರದಿಂದ ನಮಗೆ ಬರಬೇಕಾಗಿರುವ 5400 ಕೋಟಿ ರೂ. ಬಂದಿಲ್ಲ. ಹೀಗಾಗಿ ನಮ್ಮ ಬಜೆಟ್ ನಲ್ಲಿ ಇದನ್ನು 16 ಸಾವಿರ ಕೋಟಿ ರೂ.ಗೆ ಇಳಿಸಲಾಗಿದೆ. ಕೋಲಾರದ ಎತ್ತಿನ ಹೊಳೆ ಯೋಜನೆ ಪರಿಸ್ಥಿತಿಯೂ ಹೀಗೆ ಇದೆ. ತುಮಕೂರಿಗೆ ನೀರು ಬರುವವರೆಗೂ ಕಾಮಗಾರಿ ಕೈಗೆತ್ತಿಕೊಳ್ಳದಂತೆ ತಡೆಹಿಡಿಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೊನ್ನೆಯಷ್ಟೇ ಕೃಷ್ಣ ಮೇಲ್ದಂಡೆ ಯೋಜನೆ ವಿಚಾರವಾಗಿ ನಮ್ಮ ಮೇಲೆ ಒತ್ತಡ ಹಾಕಿದ್ದಾರೆ. ಈಗಾಗಲೇ ರಾಜ್ಯದಲ್ಲಿ 1.50 ಲಕ್ಷ ಕೋಟಿ ರೂ. ಮೊತ್ತದ ನೀರಾವರಿ ಯೋಜನೆ ಕೆಲಸಗಳು ನಡೆಯುತ್ತಿವೆ. ಆದರೆ ನನ್ನ ಇಲಾಖೆ ಬಜೆಟ್ ಇರುವುದು 16 ಸಾವಿರ ಕೋಟಿ ರೂ.ಗಳು. ಇದರಲ್ಲಿ ಶೇ.50ರಷ್ಟು ಹಣ ಹಳೆ ಸಾಲಕ್ಕೆ ಪಾವತಿಯಾಗುತ್ತಿದೆ ಎಂದು ಶಿವಕುಮಾರ್ ಹೇಳಿದರು.
ಶೇ.25ರಷ್ಟು ಹಣ ಭೂಸ್ವಾಧೀನ ಪ್ರಕ್ರಿಯೆಗೆ ಹೋಗುತ್ತದೆ. ಇನ್ನು ಶೇ.25ರಷ್ಟು ಹಣ ಮಾತ್ರ ಉಳಿಯುತ್ತದೆ. ಈ ಯೋಜನೆ ನಮ್ಮ ಗಮನದಲ್ಲಿದೆ. ನಿಮ್ಮ ಕಾಲದಲ್ಲಿ 130 ಕೋಟಿ ರೂ.ವೆಚ್ಚದ ಈ ಯೋಜನೆಗೆ ಅನುಮತಿ ನೀಡಲಾಗಿದ್ದು, ನಾವು ಮಾತು ಕೊಟ್ಟಿದ್ದು, ಈ ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳುತ್ತೇವೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.