ಪಂಚಮಸಾಲಿ ಮೀಸಲಾತಿ ಹೋರಾಟ | ಪೊಲೀಸರ ಮೇಲೆ ಕಲ್ಲು ತೂರಿದರೆ ಏನು ಮಾಡಬೇಕು : ಡಾ.ಜಿ.ಪರಮೇಶ್ವರ್
ಬೆಳಗಾವಿ : ‘ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಆಗ್ರಹಿಸಿ ಡಿ.10ರಂದು ನಡೆದ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಜರುಗಿದ ಲಾಠಿ ಪ್ರಹಾರವನ್ನು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸರಕಾರ ತನ್ನ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸಿದೆ. ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದರೆ ಏನು ಮಾಡಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಗುರುವಾರ ವಿಧಾನಸಭೆ ಅಧಿವೇಶನ ಕಲಾಪದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಸರಕಾರದ ಪರವಾಗಿ ಉತ್ತರ ನೀಡಿದ ಅವರು, ‘ನಾನು ಡಿ.10 ರಂದು ನಡೆದ ಘಟನೆಗೆ ಸೀಮಿತಗೊಳಿಸಿ ನನ್ನ ಹೇಳಿಕೆ ನೀಡುತ್ತಿದ್ದು, ಮೀಸಲಾತಿ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಡಿ.9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಬಗ್ಗೆ ಘೋಷಣೆಯಾದ ಬಳಿಕ ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಸಮುದಾಯದ ಮೀಸಲಾತಿ ಕುರಿತಂತೆ ಬೆಳಗಾವಿಯಲ್ಲಿ 5 ಸಾವಿರ ಟ್ರ್ಯಾಕ್ಟರ್ ತಂದು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಕರೆ ಕೊಟ್ಟಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ, 5 ಸಾವಿರ ಟ್ರ್ಯಾಕ್ಟರ್‌ಗಳನ್ನು ಬೆಳಗಾವಿಗೆ ತಂದರೆ ಏನಾಗುತ್ತದೆ ಎಂಬ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಳಿಕ ಟ್ರ್ಯಾಕ್ಟರ್ ಮೂಲಕ ಬರಲು ನಿರ್ಬಂಧ ಹೇರಲಾಗಿತ್ತು. ಅಲ್ಲದೆ, ಕ್ರೂಸರ್ ವಾಹನಗಳ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಲು ಸ್ಥಳ ನಿಗದಿಪಡಿಸಿದ್ದು ಸುವರ್ಣ ವಿಧಾನಸೌಧದ ಸುತ್ತಮುತ್ತು ನಿಷೇಧಾಜ್ಞೆ ಹೇರಲಾಗಿತ್ತು. ಈ ಮಧ್ಯೆ ಧಾರವಾಡ ಹೈಕೋರ್ಟ್ ಶಾಂತಿಯುತ ಪ್ರತಿಭಟನೆಗೆ ಸ್ಥಳವನ್ನು ನಿಗದಿಪಡಿಸಿ, ಅವಕಾಶ ಕಲ್ಪಿಸಲು ಮತ್ತು ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು ಎಂದು ಅವರು ಉಲ್ಲೇಖಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಸೂಚನೆ ಹಿನ್ನೆಲೆಯಲ್ಲಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಡಾ.ಸುಧಾಕರ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆ.ವೆಂಕಟೇಶ್ ಅವರನ್ನು ಪ್ರತಿಭಟನಾ ಸ್ಥಳಕ್ಕೆ ತೆರಳಿ, ಸ್ವಾಮೀಜಿ ಸೇರಿದಂತೆ ಕೆಲವು ಮುಖಂಡರುಗಳನ್ನು ಭೇಟಿಯಾಗಿ, ಮಾತುಕತೆಗೆ ಬರುವಂತೆ ಆಹ್ವಾನಿಸಲು ತಿಳಿಸಿದ್ದರು. ಆದರೆ, ಮುಖಂಡರುಗಳು ಸಚಿವರುಗಳ ಮಾತಿಗೆ ಸ್ಪಂದಿಸದೆ, ಸಿಎಂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಎಲ್ಲ ಪ್ರತಿಭಟನೆಗಳಿಗೂ ಸಿಎಂ ಅವರೇ ಹೋಗಬೇಕೆಂದರೆ ಅದು ಸಾಧ್ಯವೇ? ಎಂದು ಪರಮೇಶ್ವರ್ ಪ್ರಶ್ನಿಸಿದರು.
ಪ್ರಚೋದನೆ ಕಾರಣ: ಪ್ರತಿಭಟನಾಕಾರರನ್ನು ಸುವರ್ಣ ವಿಧಾನಸೌಧದೆಡೆಗೆ ನುಗ್ಗಲು ಪ್ರಚೋದಿಸಿದ ಕಾರಣ, ಪೊಲೀಸ್ ಬ್ಯಾರಿಕೇಡ್‍ಗಳನ್ನು ತಳ್ಳಿ, ಹೆದ್ದಾರಿ ತಡೆದು, ಸುವರ್ಣಸೌಧದೆಡೆಗೆ 10 ಸಾವಿರಕ್ಕೂ ಅಧಿಕ ಮಂದಿ ಏಕಕಾಲಕ್ಕೆ ನುಗ್ಗಲು ಯತ್ನಿಸಿದರು, ಅಲ್ಲದೆ, ಪೊಲೀಸರ ಮೇಲೆಯೇ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ 24 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ವಿಡಿಯೋ ದಾಖಲೆಗಳು ಇವೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ವಿಪಕ್ಷದವರು ಪ್ರಶ್ನೆ ಮಾಡುತ್ತಾರೆ. ಒಂದು ಜವಾಬ್ದಾರಿಯುತವಾದ ಸರಕಾರ ನಮ್ಮದು. ಪ್ರತಿಭಟನೆ ಎಲ್ಲರ ಹಕ್ಕು, ಆದರೆ ಶಾಂತಿಯುತವಾಗಿ ಮಾಡಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜವಾಬ್ದಾರಿಯುತವಾಗಿಯೇ ವರ್ತಿಸಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.