ಡಿ.21ರಿಂದ ಜ.19ರವರೆಗೆ ‘ಕರಾವಳಿ ಉತ್ಸವ’ : ಸ್ಪೀಕರ್ ಯು.ಟಿ.ಖಾದರ್
ಬೆಳಗಾವಿ (ಸುವರ್ಣ ವಿಧಾನಸೌಧ) : ‘ಕರಾವಳಿ ಭಾಗದ ಸಂಸ್ಕೃತಿ, ಸಂಪ್ರದಾಯಗಳ ಪ್ರದರ್ಶನ ಹಾಗೂ ಆಹಾರ ವೈವಿಧ್ಯತೆಯನ್ನು ಪರಿಚಯಿಸುವ ಉದ್ದೇಶದಿಂದ ಇದೇ ತಿಂಗಳ 21ರಿಂದ 2025ರ ಜನವರಿ 19ರ ವರೆಗೆ ಒಂದು ತಿಂಗಳ ಕಾಲ ‘ಕರಾವಳಿ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಬುಧವಾರ ಸುವರ್ಣ ವಿಧಾನಸೌಧದಲ್ಲಿನ ಸ್ಪೀಕರ್ ಕೊಠಡಿಯಲ್ಲಿ ‘ಕರಾವಳಿ ಉತ್ಸವ’ದ ಲಾಂಛನ (ಲೋಗೋ) ಅನಾವರಣಗೊಳಿಸಿದ ಬಳಿಕ ಮಾತನಾಡಿದ ಅವರು, ಡಿ.21ರ ಸಂಜೆ 5.30ಕ್ಕೆ ‘ಕರಾವಳಿ ಉತ್ಸವ’ಕ್ಕೆ ಚಾಲನೆ ನೀಡಲಾಗುವುದು. ಕರಾವಳಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 50ಲಕ್ಷ ರೂ. ಮತ್ತು ಪ್ರವಾಸೋದ್ಯಮ ಇಲಾಖೆ 20ಲಕ್ಷ ರೂ.ಬಿಡುಗಡೆ ಮಾಡಿವೆ. ಉಳಿದಂತೆ ಮುಡಾ, ಕ್ರೆಡೈ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಹಣಕಾಸಿನ ನೆರವು ಸಿಗುವ ವಿಶ್ವಾಸವಿದೆ ಎಂದು ನುಡಿದರು.
ಮಂಗಳೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕರಾವಳಿ ಉತ್ಸವ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದೆ. ಜನರಿಗೆ ಅನುಕೂಲವಾಗುವ, ನಮ್ಮ ಕರಾವಳಿಯ ಸಂಸ್ಕೃತಿಯನ್ನು ರಾಜ್ಯದ ಬೇರೆ ಜಿಲ್ಲೆಗಳಿಗೆ, ಬೇರೆ ರಾಜ್ಯಗಳಿಗೆ ಪರಿಚಯಿಸುವ ಉದ್ದೇಶವನ್ನು ‘ಕರಾವಳಿ ಉತ್ಸವ’ ಹೊಂದಿದೆ. ಅಲ್ಲದೆ, ಜನರ ನಡುವೆ ಪರಿಸ್ಪರ ಸೌಹಾರ್ದತೆ ಮೂಡಿಸಲು ಕರಾವಳಿ ಉತ್ಸವ ಸಹಕಾರಿಯಾಗಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
‘ಜಾಗತಿಕ ಹಳ್ಳಿ ಎಂಬ ಧ್ಯೇಯದೊಂದಿಗೆ ವಸ್ತು ಪ್ರದರ್ಶನ, ಆಹಾರ ಮೇಳ, ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಡಿ.28 ಮತ್ತು 29ರಂದು ತಣ್ಣೀರು ಬಾವಿ ಬೀಚ್‍ನಲ್ಲಿ ‘ಬೀಚ್ ಉತ್ಸವ’ ಆಯೋಜಿಸಲಾಗಿದೆ. ಡಿ.28ಕ್ಕೆ ಸಂಜೆ 6 ಗಂಟೆಗೆ ಬೀಚ್ ಉತ್ಸವ ಉದ್ಘಾಟನೆಗೊಳ್ಳಲಿದ್ದು 6.30ರಿಂದ ವಿವಿಧ ತಂಡಗಳ ನೃತ್ಯ ಪ್ರದರ್ಶನ ಇರಲಿದೆ. ಸಂಜೆ 8 ಗಂಟೆಗೆ ಗಾಯಕ ರಘು ದೀಕ್ಷಿತ್ ತಂಡ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಗಾಳಿಪಟ ಉತ್ಸವ :
ಡಿ.29ರ ಬೆಳಗ್ಗೆ 5.30ಕ್ಕೆ ಯೋಗ, 6.30ಕ್ಕೆ ಜುಂಬ, 9ಕ್ಕೆ ಬೀಚ್ ಸ್ಪೋಟ್ರ್ಸ್ ಆರಂಭಗೊಳ್ಳಲಿದೆ. ಸಂಜೆ 5.30ಕ್ಕೆ ಆನ್‍ಲೈನ್ ಸ್ಪರ್ಧೆ, 8ಕ್ಕೆ ಶೋರ್ ಬ್ಯಾಂಡ್ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 2025ರ ಜನವರಿ 4 ಮತ್ತು 5ರಂದು ಕದ್ರಿ ಪಾರ್ಕ್‍ನಲ್ಲಿ ಅಟೋ ಮೊಬೈಲ್ ಮತ್ತು ಶ್ವಾನ ಪ್ರದರ್ಶನ, ಜನವರಿ 11 ಮತ್ತು 12 ರಂದು ಕದ್ರಿ ಪಾರ್ಕ್‍ನಲ್ಲಿ ಯುವ ಉತ್ಸವ, ಜನವರಿ 18 ಮತ್ತು 19ರಂದು ತಣ್ಣೀರು ಬಾವಿ ಬೀಚ್‍ನಲ್ಲಿ ಅಂತರ ರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ ಎಂದು ಯು.ಟಿ.ಖಾದರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ’ಸೋಜಾ, ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು.