ಅಂಬೇಡ್ಕರ್‌ಗೆ ಅನ್ಯಾಯ ಮಾಡಿದ ಕಾಂಗ್ರೆಸ್: ಗೋವಿಂದ ಕಾರಜೋಳ

ಬೆಳಗಾವಿ : ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲಲು ಕಾಂಗ್ರೆಸ್ ಪಕ್ಷ ಕಾರಣವಾಗಿತ್ತು ಎಂದು ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ.
ಮಂಗಳವಾರ ಜಿಲ್ಲೆಯ ನಿಪ್ಪಾಣಿಯಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಭೀಮ ಹೆಜ್ಜೆ’ ಶತಮಾನದ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಜೀವಿತ ಕಾಲದಲ್ಲಿ ಅವರಿಗೆ ಭಾರತ ರತ್ನ ನೀಡಲಿಲ್ಲ. ಗೌರವವನ್ನೂ ಕೊಡಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೂ ಕವಡೆ ಕಿಮ್ಮತ್ತನ್ನೂ ಕಾಂಗ್ರೆಸ್ಸಿನವರು ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು.
ಬಾಬು ಜಗಜೀವನರಾಂ ಅವರನ್ನೂ ಕುತಂತ್ರದಿಂದ ಸೋಲಿಸಲು ಕಾಂಗ್ರೆಸ್ ಮುಂದಾಗಿತ್ತು. ಪ್ರಧಾನಿ ಮೋದಿ ಅವರು, ಅಂಬೇಡ್ಕರರ ಸಂವಿಧಾನ ಇರುವ ಕಾರಣ ತಮ್ಮಂತಹ ಸಾಮಾನ್ಯ ಮನುಷ್ಯ ಪ್ರಧಾನಿ ಆಗಲು ಸಾಧ್ಯವಾಯಿತೆಂದು ತಿಳಿಸಿದ್ದರು. ಕಾಂಗ್ರೆಸ್ಸಿಗರು, ಕಾಂಗ್ರೆಸ್‍ನ ಮುಖಂಡರು ಹೀಗೆ ಹೇಳಿದ್ದಾರಾ? ಎಂದು ಅವರು ಪ್ರಶ್ನಿಸಿದರು.
ಇಂದಿರಾ ಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿಯವರು ದಲಿತರಿಗೆ ಗೌರವ ಕೊಡುತ್ತಿಲ್ಲ. ಸಿದ್ದರಾಮಯ್ಯನವರ ಸರಕಾರವು ದಲಿತರ ಅಭ್ಯುದಯಕ್ಕೆ ಇರುವ 38 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ದೂರಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.