ಹುಕ್ಕೇರಿ| ಹಲ್ಲಿ ಬಿದ್ದ ಹಾಲು ಕುಡಿದು ಶಾಲಾ ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಬೆಳಗಾವಿ: ಶಾಲೆಯಲ್ಲಿ ತಯಾರಿಸಿದ ಕ್ಷೀರಭಾಗ್ಯ ಯೋಜನೆಯ ಹಲ್ಲಿ ಬಿದ್ದ ಹಾಲನ್ನು ಕುಡಿದ ಪರಿಣಾಮ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಉಳಾಗಡ್ಡಿ ಖಾನಾಪೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಲು ಸೇವನೆ ಮಾಡಿದ ಬಳಿಕ ಹಾಲಿಗೆ ಹಲ್ಲಿ ಬಿದ್ದ ವಿಷಯ ಬಹಿರಂಗವಾಗಿತ್ತು. ವಿಚಾರ ತಿಳಿಯುತ್ತಿದ್ದಂತೆ ಸಿಬ್ಬಂದಿ, ಸ್ಥಳೀಯರ ಸಹಾಯದಿಂದ ಮುಂಜಾಗೃತ ಕ್ರಮವಾಗಿ ಶಾಲಾ ಮಕ್ಕಳನ್ನು ಸಂಕೇಶ್ವರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಎರಡು ಅಂಬ್ಯುಲನ್ಸ್ ಹಾಗೂ ಕೆಲವು ಖಾಸಗಿ ವಾಹನಗಳ ಮೂಲಕ ಸಂಕೇಶ್ವರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಲ್ವರು ಮಕ್ಕಳನ್ನು ಹುಕ್ಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುದ್ದಿ ತಿಳಿತ್ತಿದಂತೆಯೇ ಶಾಲಾ ಮಕ್ಕಳ ಪೋಷಕರು ಗಾಬರಿಗೊಂಡು ಸಂಕೇಶ್ವರ ಸರಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.