ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣವಲ್ಲ : ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣನಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಎರಡು ಸಂಖ್ಯೆ ಆಗದೇ ಇರುವುದಕ್ಕೆ ನಮ್ಮ ನಾಯಕರ ಅತಿಯಾದ ಆತ್ಮವಿಶ್ವಾಸ ಕಾರಣ .ಜತೆಗೆ ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣನಲ್ಲ. 5 ಲಕ್ಷ ಲಿಂಗಾಯತ ಮತದಾರರು ಬೆಳಗಾವಿಯಲ್ಲಿದ್ದಾರೆ. ಅವರೇನು ನನ್ನ ಮಾತು ಕೇಳುತ್ತಾರಾ? ಎಂದು ಪ್ರಶ್ನಿಸಿದರು.
ಈ ಬಾರಿ ನಾವು ಗೆಲ್ಲುವ ನಿಟ್ಟಿನಲ್ಲಷ್ಟೇ ಕೆಲಸ ಮಾಡಿದ್ದೇವೆಯೇ ಹೊರತು ಸೋಲಿಸಲು ಅಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಮೃಣಾಲ್‍ಗೆ ತೀವ್ರ ಹಿನ್ನಡೆ ಆಗಿದೆ. ಲಿಂಗಾಯತ ಹಾಗೂ ಮರಾಠ ಮತಗಳನ್ನು ಸೆಳೆಯಲು ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಹೇಳಿದರು.
ಪಕ್ಷದ ಬೆಂಬಲ, ನಮ್ಮ ವರ್ಚಸ್ಸು, ಅಭಿವೃದ್ಧಿ ಕೆಲಸದಿಂದ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಗೆಲುವಾಗಿದೆ. ನಿರಂತರ ಸಂಪರ್ಕ ಈ ಚುನಾವಣೆ ಗೆಲ್ಲಲು ಅನುಕೂಲವಾಗಿದೆ. ಬಿಜೆಪಿ ನಾಯಕರಿಗಿಂತ ಮತದಾರರು ನಮ್ಮ ಜತೆಗಿದ್ದರು. ಅಲ್ಲಿನ ಅಭ್ಯರ್ಥಿ ಬಗ್ಗೆ ಅಸಮಾಧಾನವಿತ್ತು. ಅದು ನಮಗೆ ಅನುಕೂಲವಾಗಿದೆ. ಸ್ವಪಕ್ಷದ ವಿರೋಧಿಗಳ ವಿರುದ್ಧ ದೂರು ನೀಡಲ್ಲ, ವರಿಷ್ಠರ ಗಮನಕ್ಕೆ ತರುತ್ತೇವೆ. ಪತ್ರ ಕೊಟ್ಟರೂ ಏನೂ ಪ್ರಯೋಜನ ಆಗುವುದಿಲ್ಲ ಎಂದು ಅವರು ತಿಳಿಸಿದರು.