ಎಸ್.ಎಂ.ಕೃಷ್ಣ ಅವರ ಸಲಹೆಯನ್ನು ಪಡೆದೇ ನಾನು ಕಾಂಗ್ರೆಸ್ ಸೇರಿದೆ : ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಳಗಾವಿ (ಸುವರ್ಣ ವಿಧಾನಸೌಧ) : ‘ಹಿರಿಯ ರಾಜಕೀಯ ಮುತ್ಸದ್ದಿ, ದೂರದೃಷ್ಟಿಯುಳ್ಳ ಅಪರೂಪದ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಲಹೆಯನ್ನು ಪಡೆದೇ ನಾನೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಮರಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಸ್ಪೀಕರ್ ಮಂಡಿಸಿದ ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ದೀರ್ಘಕಾಲ ರಾಜಕಾರಣ ಮಾಡಿದ್ದ ಕೃಷ್ಣ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ(ಪಿಎಸ್ಪಿ)ಯ ಸಭೆಯಲ್ಲಿ ವಿದ್ಯಾರ್ಥಿಯಾಗಿದ್ದ ನಾನು ಭಾಗವಹಿಸಿದ್ದೆ. ಬಳಿಕ ನಾನು ಲೋಹಿಯಾರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ. ಎಸ್.ಎಂ.ಕೃಷ್ಣ 1962ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.
ಎಸ್.ಎಂ.ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗಲೇ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ. ಅವರು ರಾಜ್ಯಪಾಲರಾಗಿದ್ದಾಗ ನಾನು ಅವರನ್ನು ಭೇಟಿಯಾಗಿ, ನಾನು ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು. ಅತ್ಯಂತ ಒಳ್ಳೆಯ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಯಾವತ್ತೂ ದ್ವೇಷ, ಸೇಡಿನ ರಾಜಕಾರಣ ಮಾಡಿದವರಲ್ಲ. ಅವರ ಕಾಲದಲ್ಲೇ ನಟ ಡಾ.ರಾಜ್ಕುಮಾರ್ ಅವರ ಅಪಹರಣ ಆಗಿ ಆ ಸಂದರ್ಭದ ದೊಡ್ಡ ಸವಾಲನ್ನು ಎದುರಿಸಿದ್ದರು. ಅದನ್ನು ನಿಭಾಯಿಸಿದ್ದರು ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಸಿಂಗಾಪುರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವ ಮಹೋನ್ನತ್ತ ಉದ್ದೇಶ ಹೊಂದಿದ್ದರು. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಎಸ್.ಎಂ.ಕೃಷ್ಣರ ಕೊಡುಗೆ ಅಪಾರ. ಕಾಂಗ್ರೆಸ್ ಮೂಲಕ ಸುದೀರ್ಘ ರಾಜಕಾರಣ ಮಾಡಿದ ಅವರು ಆ ಬಳಿಕ ಬಿಜೆಪಿ ಸೇರಿದ ಒಂದು ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದ ದಕ್ಷ ಆಡಳಿತಗಾರ, ಸಜ್ಜನ ರಾಜಕಾರಣಿ ಆಗಿದ್ದರು ಎಂದು ಸಿದ್ದರಾಮಯ್ಯ ಗುಣಗಾನ ಮಾಡಿದರು.
‘ನಕಲಿ ಛಾಪ ಕಾಗದದ ಕರೀಂ ಲಾಲ್ ತೆಲಗಿ ಪ್ರಕರಣ ಸಿಬಿಐ ತನಿಖೆಗೆ ಕೊಡಲು ಎಸ್.ಎಂ.ಕೃಷ್ಣರ ಪತ್ನಿ ಪ್ರೇಮಾ ಕೃಷ್ಣ ಅವರೇ ಕಾರಣ. ಕೃಷ್ಣರ ಸಂಪುಟದಲ್ಲಿ ನಾನು ಮಂತ್ರಿ ಆಗಿದ್ದೆ. ಆ ದಿನ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಅಂದು ಬೆಳಗ್ಗೆ ನಾನು ಕೃಷ್ಣರ ನಿವಾಸಕ್ಕೆ ತೆರಳಿದೆ. ಕೃಷ್ಣ ಉಪಹಾಸ ಸೇವಿಸುವ ವೇಳೆ ನನಗೂ ಉಪಹಾರ ಸೇವಿಸಲು ಆಹ್ವಾನಿಸಿದರು. ಆದರೆ, ನಾನು ಆಗಲೇ ಮುಗಿಸಿದ್ದೇನೆ, ಬೇಡ ಎಂದೇ. ಇದೇ ವೇಳೆ ಕೃಷ್ಣರಿಗೆ ದೋಸೆ ಬಡಿಸಲು ಬಂದ ಕೃಷ್ಣರ ಪತ್ನಿ ಪ್ರೇಮಾ, ‘ಏನ್ರಿ ಅದು ತೆಲಗಿ ಪ್ರಕರಣ, ಸಿಬಿಐಗೆ ಕೊಡಿ ಎಂದು ಕೇಳುತ್ತಿದ್ದಾರೆ, ಸಿಬಿಐಗೆ ಕೊಡಬೇಕು ತಾನೇ’ ಎಂದರು. ಇದಕ್ಕೆ ಹೋಗು ಹೋಗು ನಿನಗೇನು ಗೊತ್ತು ಎಂದು ಕೃಷ್ಣ ಪ್ರತಿಕ್ರಿಯಿಸಿದರು. ಬಳಿಕ ನಾನು ಅವರೊಂದಿಗೆ ವಿಧಾನಸೌಧಕ್ಕೆ ಕಾರಿನಲ್ಲಿ ತೆರಳುವ ವೇಳೆ ರೀ ಪರಮೇಶ್ವರ್.. ತೆಲಗಿ ಪ್ರಕರಣ ಸಿಬಿಐಗೆ ಕೊಡುವ ಬಗ್ಗೆ ಪ್ರೇಮಾ ಹೇಳಿದ್ದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿ, ಆ ಬಳಿಕ ಆ ಪ್ರಕರಣವನ್ನು ಸಂಪುಟದಲ್ಲಿ ಚರ್ಚಿಸಿ ಸಿಬಿಐಗೆ ಕೊಟ್ಟರು. ಅದೇ ರೀತಿಯಲ್ಲಿ ಯಾವ ವ್ಯಕ್ತಿಗೆ ಏನು ಕೆಲಸ ಕೊಡಬೇಕು. ಆ ವ್ಯಕ್ತಿಯ ಸಾಮಥ್ರ್ಯ ಎನು ಎಂಬುದನ್ನು ಅರಿತಿದ್ದರು. ಹೀಗಾಗಿಯೇ ಕೃಷ್ಣ ಅವರು ನನಗೆ ಮತ್ತು ಡಿ.ಕೆ.ಶಿವಕುಮಾರ್ಗೆ ಬೇರೆ ಬೇರೆ ಕೆಲಸ ಕೊಡುತ್ತಿದ್ದರು’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ