ಮಂಗಳೂರು ವಿವಿಯ ನಿವೃತ್ತ ನೌಕರರಿಗೆ ನಿವೃತ್ತಿ ವೇತನ ನೀಡಲು ಐವನ್ ಡಿಸೋಜಾ ಆಗ್ರಹ
ಐವನ್ ಡಿಸೋಜಾ
ಬೆಳಗಾವಿ : ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ 200 ಮಂದಿ ನೌಕರರಿಗೆ ನಿವೃತ್ತಿ ವೇತನ ಮತ್ತು ಉಪದಾನ ನೀಡುವ ಬಗ್ಗೆ ವಿಧಾನ ಪರಿಷತ್ನಲ್ಲಿ ಶಾಸಕ ಐವನ್ ಡಿಸೋಜಾ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಸೋಮವಾರ ಉನ್ನತ ಶಿಕ್ಷಣ ಸಚಿವರ ಗಮನ ಸೆಳೆದರು.
ಮಂಗಳೂರು ವಿಶ್ವ ವಿದ್ಯಾನಿಲಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆರು ವರ್ಷಗಳಿಂದ ಸರಕಾರ ಯಾವುದೇ ಅನುದಾನವನ್ನು ನೀಡದೇ ಇರುವುದರಿಂದ ವಿಶ್ವ ವಿದ್ಯಾನಿಲಯ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತಗೊಂಡು ಮತ್ತು ವಿಶ್ವವಿದ್ಯಾನಿಲಯ ನಡೆಸುತ್ತಿರುವ ಅಧೀನ ಕಾಲೇಜುಗಳಲ್ಲಿನ ಅಭಿವೃದ್ಧಿಯೂ ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಒಟ್ಟು 200 ಮಂದಿ ನೌಕರರಿಗೆ ನಿವೃತ್ತಿ ವೇತನ ಮತ್ತು ಉಪಾದನ ನೀಡಿಲ್ಲ. ನಿವೃತ್ತ ನೌಕರರು ವೇತನ ಉಪದಾನಕ್ಕಾಗಿ ಚುನಾಯಿತ ಪ್ರತಿನಿಧಿಗಳಲ್ಲಿ ಮತ್ತು ಸರಕಾರದ ಅಧಿಕಾರಿಗಳ ಮುಂದೆ ಅಲೆದಾಡುತ್ತಿರುವ ಪರಿಸ್ಥಿತಿ ಬಂದಿರುವುದು ಅತ್ಯಂತ ದುಃಖಕರ ವಿಚಾರವಾಗಿದೆ. ಪ್ರಸ್ತುತ ನಿವೃತ್ತ ವೇತನ ಉಪದಾನ ಮತ್ತು ಪಿಂಚಣಿ ನೀಡಲು 36 ಕೋಟಿ ರೂ.ಬೇಕೆಂದು ಮಂಗಳೂರು ವಿವಿ ಉಪಕುಲಪತಿಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಐವನ್ ಡಿಸೋಜಾ ತಿಳಿಸಿದರು.
ಈ ಬಗ್ಗೆ ಕೂಡಲೇ ಉನ್ನತ ಶಿಕ್ಷಣ ಸಚಿವರು ಮತ್ತು ಆರ್ಥಿಕ ಇಲಾಖೆ ಕ್ರಮಕೈಗೊಳ್ಳಬೇಕೆಂದು ಐವನ್ ಡಿಸೋಜಾ ಪ್ರಸ್ತಾಪಿಸಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಉತ್ತರ ಒದಗಿಸುವಂತೆ ಸಚಿವರಿಗೆ ಸೂಚನೆ ನೀಡಿದರು.