ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ | ದೇಶದ ರಾಜಕೀಯ, ಕಾಂಗ್ರೆಸ್ ಹೋರಾಟಕ್ಕೆ ಹೊಸ ತಿರುವು : ಕೆ.ಸಿ.ವೇಣುಗೋಪಾಲ್
ಬೆಳಗಾವಿ : ಬೆಳಗಾವಿಯಲ್ಲಿ ಇದೇ ತಿಂಗಳು 26ರಂದು ನಡೆಯಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಿಂದ ದೇಶದ ರಾಜಕೀಯ, ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ತಿರುವು ಸಿಗಲಿದೆ ಎಂದು ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದರು.
ಮಂಗಳವಾರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿ ಕೇವಲ ಒಂದು ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಈ ಅಧಿಕಾರವನ್ನು ಅವರು 1924ರ ಡಿ.26ರಂದು ಬೆಳಗಾವಿ ಅಧಿವೇಶನದಲ್ಲಿ ಸ್ವೀಕರಿಸಿದ್ದರು. ಈಗ ನಾವು 2024ರ ಡಿಸೆಂಬರ್ ತಿಂಗಳಲ್ಲಿದ್ದೇವೆ. ನೂರು ವರ್ಷಗಳು ತುಂಬಿರುವ ಈ ಕ್ಷಣವನ್ನು ಸಂಭ್ರಮಿಸಲು ಪ್ರತಿ ಕಾಂಗ್ರೆಸ್ಸಿಗನಿಗೆ ಹೆಮ್ಮೆಯ ವಿಚಾರ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಅನೇಕ ಸಂದೇಶಗಳನ್ನು ಜನರಿಗೆ ನೀಡಿತ್ತು ಎಂದು ಅವರು ತಿಳಿಸಿದರು.
ಮಹಾತ್ಮ ಗಾಂಧಿ ಅಹಿಂಸೆ ಬಗ್ಗೆ ಪ್ರತಿಪಾದನೆ ಮಾಡಿದರು. ಬ್ರಿಟೀಷರ ವಿರುದ್ಧ ಅಹಿಂಸೆ ಮಾರ್ಗದಲ್ಲಿ ಹೋರಾಡಿ ಪ್ರೀತಿ, ಸಮಾನತೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ಎಲ್ಲವು ಬಿಜೆಪಿ ಸರಕಾರದ ಆಡಳಿತದಲ್ಲಿ ನಾಶವಾಗುತ್ತಿವೆ. ಈಗ ದೇಶದಲ್ಲಿ ಸಮಾನತೆ ಇಲ್ಲ. ಶ್ರೀಮಂತರು ಶ್ರೀಮಂತರಾಗಿ, ಬಡವರು ಕಡು ಬಡವರಾಗುತ್ತಿದ್ದಾರೆ. ಕೇವಲ ಒಬ್ಬ ವ್ಯಕ್ತಿಯ ಹಿತಾಸಕ್ತಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ವೇಣುಗೋಪಾಲ್ ಟೀಕಿಸಿದರು.
ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಎಲ್ಲ ಆಸ್ತಿಗಳು ಒಬ್ಬ ವ್ಯಕ್ತಿಯ ಕೈಗೆ ಸೇರುತ್ತಿದೆ. ಹೀಗಾಗಿ ಸಮಾನತೆ ಎಂಬುದೇ ದೇಶದಲ್ಲಿ ಇಲ್ಲವಾಗಿದೆ. ಪರಿಶಿಷ್ಟ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಸೇರಿದಂತೆ ಸಾಮಾನ್ಯ ವರ್ಗದ ಬಡವರಿಗೆ ರಕ್ಷಣೆ ಸಿಗಬೇಕು ಎಂಬ ಉದ್ದೇಶದಿಂದ ನಾವು ಜಾತಿಗಣತಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನೂರು ವರ್ಷಗಳ ಹಿಂದೆ ಗಾಂಧೀಜಿ ಹೇಳಿದ್ದ ಸಮಾನತೆ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಬಿಜೆಪಿ ದೇಶದೆಲ್ಲೆಡೆ ದ್ವೇಷದ ಮಾರುಕಟ್ಟೆ ತೆರೆದಿದ್ದು, ಪ್ರತಿ ನಿತ್ಯ, ಧರ್ಮದ ಹೆಸರಲ್ಲಿ ದ್ವೇಷ ಬಿತ್ತುತ್ತಿದೆ. ಈಗ ಅವರು ಪ್ರಜಾಸತ್ತಾತ್ಮಕ ಮೌಲ್ಯವನ್ನೇ ಹೈಜಾಕ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಸಭೆ ದೇಶದ ರಾಜಕೀಯ ಹಾಗೂ ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಹೊಸ ತಿರುವು ನೀಡಲಿದೆ. ಬೆಳಗಾವಿಯಲ್ಲಿ ನಾವು ದೊಡ್ಡ ನಿರ್ಧಾರ ಮಾಡಬೇಕಿದೆ ಎಂದು ವೇಣುಗೋಪಾಲ್ ಹೇಳಿದರು.
ನಾವು ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾಧಿಕಾರಿ ಆಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದು, ಈ ಸಭೆ ಬಹಳ ಪ್ರಮುಖವಾಗಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಈ ಸಭೆಯನ್ನು ಯಶಸ್ವಿಗೊಳಿಸುತ್ತಿದ್ದು, 26ರಂದು ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ಶಾಶ್ವತ ಆಹ್ವಾನಿತರು, ವಿಶೇಷ ಆಹ್ವಾನಿತರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಸಂಸದೀಯ ಸಮಿತಿ ಸದಸ್ಯರು, ಪಕ್ಷದ ಪ್ರಮುಖ ಘಟಕಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಮರುದಿನ ಬೃಹತ್ ಸಮಾವೇಶ ನಡೆಯಲಿದ್ದು, ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಇದೊಂದು ಮಹತ್ತರವಾದ ಸಭೆಯಾಗಲಿದೆ. ಅದೇ ದಿನ ಅದೇ ಸಮಯದಲ್ಲಿ ಎಲ್ಲ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದಲೂ ಈ ಕ್ಷಣವನ್ನು ಆಚರಿಸುವಂತೆ ಎಐಸಿಸಿಯಿಂದ ಸೂಚನೆ ನೀಡಲಾಗಿದೆ ಎಂದು ವೇಣುಗೋಪಾಲ್ ತಿಳಿಸಿದರು.
ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮ: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇದೇ ವೇಳೆ ಸರಕಾರದ ವತಿಯಿಂದ ಮುಖ್ಯಮಂತ್ರಿ ನೇತೃತ್ವದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ವಿಧಾನಪರಿಷತ್ ಸಭಾಪತಿ, ಸಂಸತ್ತಿನ ಎರಡೂ ಸದನಗಳ ವಿರೋಧ ಪಕ್ಷಗಳ ನಾಯಕರು ಸೇರಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಸದರು, ಎಲ್ಲ ಪಕ್ಷದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೂ ಆಹ್ವಾನ ನೀಡಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ರಾಜ್ಯಸಭಾ ಸದಸ್ಯ ಅಜಯ್ ಮಾಕೇನ್, ಸಚಿವರಾದ ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿ.ಸಿ.ಚಂದ್ರಶೇಖರ್, ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.