ಬೆಳಗಾವಿ ಅಧಿವೇಶನ | ಭೂ ಕಂದಾಯ ಕಾಯ್ದೆ-1964ಕ್ಕೆ ತಿದ್ದುಪಡಿ ತರುವ ಬಗ್ಗೆ ತೀರ್ಮಾನ : ಕೃಷ್ಣ ಭೈರೇಗೌಡ
ಬೆಳಗಾವಿ : ಭೂ ಕಂದಾಯ ಕಾಯ್ದೆ, 1964ಕ್ಕೆ ತಿದ್ದುಪಡಿ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಭೂ ಕಂದಾಯ ಕಾಯ್ದೆ 1964ರ ಕಲಂ 79(2)ರಲ್ಲಿರುವ ಜಮೀನುಗಳ ವಿಶೇಷಾಧಿಕಾರಗಳನ್ನು ಮುಂದುವರಿಸಿ, ಅವುಗಳನ್ನು ಅನುಭೋಗದಾರರಿಗೆ ಅವರ ಹಿಡುವಳಿ ಜಮೀನನ್ನು ಹೊರತುಪಡಿಸಿ 5 ಎಕರೆಗೆ ಮೀರದಂತೆ ಸರಕಾರವು ನಿರ್ಧರಿಸಬಹುದಾದಂತಹ ಗುತ್ತಿಗೆ ಮೌಲ್ಯವನ್ನು ವಿಧಿಸಿ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲು ಅನುವಾಗುವಂತೆ ಭೂ ಕಂದಾಯ ಕಾಯ್ದೆ, 1964ಕ್ಕೆ ತಿದ್ದುಪಡಿಗೆ ಚಿಂತಿಸಲಾಗಿದೆ ಎಂದರು.
ಗೋಮಾಳ, ಗಾಯರಾಣ, ಹುಲ್ಲಬನ್ನಿ. ಸೊಪ್ಪಿನಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿಯೊಂದನ್ನು ರೂಪಿಸಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿತ್ತು. ಈ ಸಮಿತಿಯು ವಿವಿಧ ದಿನಾಂಕಗಳಂದು ಸಭೆ ನಡೆಸಿದೆ. 24.01.2023ರಂದು ನಡೆದ ಸಭೆಯಲ್ಲಿ ಉಪ ಸಮಿತಿಯು ಕಾಯ್ದೆಯ ತಿದ್ದುಪಡಿ ತರುವ ಬಗ್ಗೆ ತೆಗೆದುಕೊಂಡ ತೀರ್ಮಾನ ಅನುಷ್ಠಾನಗೊಳಿಸಲು ಇರುವ ಕಾನೂನು ತೊಡಕುಗಳ ಬಗ್ಗೆ ಸರಕಾರವು ಪರಿಶೀಲಿಸಲಿದೆ ಎಂದು ಕೃಷ್ಣ ಭೈರೇಗೌಡ ಸ್ಪಷ್ಟನೆ ನೀಡಿದರು.
ರಾಜ್ಯ ಸರಕಾರವು ಕಾಲಕಾಲಕ್ಕೆ ಹೊರಡಿಸಬಹುದಾದಂಥ ಸಾಮಾನ್ಯ ಅಥವಾ ವಿಶೇಷ ಆದೇಶಗಳಿಗೆ ಒಳಪಟ್ಟು ರೂಢಿಯಂತೆ ಅಂಥ ಯಾವುದೇ ಆದೇಶದ ಮೇರೆಗೆ ಅನುಭೋಗಿಸಲಾಗುತ್ತಿರುವ ವಿಶೇಷಾಧಿಕಾರಗಳು ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಮ್ಮಿ ಭೂಮಿಗಳು, ಬಾಣಿ ಭೂಮಿಗಳು ಮತ್ತು ಕಾಣೆ ಭೂಮಿಗಳ ಬಗೆಗಿನ ವಿಶೇಷಾಧಿಕಾರಗಳು ಮುಂದುವರೆಯತಕ್ಕದ್ದು ಎಂದು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 79ರ (2)ರಡಿ ಕಲಂ 79 ಉಪ-ಪ್ರಕರಣ (1)ರಲ್ಲಿ ತಿಳಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ವಿವರಿಸಿದರು.