ಪ್ರವಾಹ ಪರಿಸ್ಥಿತಿ ಅವಲೋಕಿಸಿ, ಸಂತ್ರಸ್ತರಿಗೆ ಆರ್ಥಿಕ ಸಹಾಯ : ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ : ಸತತ ಮಳೆಯಿಂದಾಗಿ ಪ್ರವಾಹ ಉಂಟಾಗಿರುವ ಜಿಲ್ಲೆಯ ಖಾನಾಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜನರ ಸಮಸ್ಯೆಗಳನ್ನು ಅಲಿಸುವುದರ ಜೊತೆಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡುವ ಮೂಲಕ ಸ್ಪಂದಿಸಿದರು.
ಸೋಮವಾರ ಖಾನಾಪುರ ತಾಲೂಕಿನ ಮಲಪ್ರಭಾ ಸೇತುವೆಯ ವೀಕ್ಷಣೆ ಮಾಡಿದ ಅವರು, ನದಿಗೆ ನೀರಿನ ಒಳಹರಿವಿನ ಪ್ರಮಾಣ ಮತ್ತು ಸಧ್ಯದ ಪರಿಸ್ಥಿತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮುಖ್ಯರಸ್ತೆಯಲ್ಲಿರುವ ಸೇತುವೆಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದು, ತುರ್ತಾಗಿ ಎರಡೂ ಕಡೆಯ ಗ್ರಿಲ್‍ಗಳ ದುರಸ್ತಿಗೆ ಸೂಚಿಸಿದರು.
ಜೊತೆಗೆ ತಾಲೂಕಿನಲ್ಲಿ ಬೆಳೆ ನಷ್ಟ, ಮನೆ ಹಾನಿ ಸೇರಿದಂತೆ ಇನ್ನಿತರ ಸಂಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಮೂಲಸೌಕರ್ಯ ಕೊರತೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿನ ಅಮಗಾಂವ್ ಗ್ರಾಮದ ಅನಾರೋಗ್ಯ ಪೀಡಿತ ಮಹಿಳೆಯನ್ನು ಗ್ರಾಮಸ್ಥರು ಹೊತ್ತು ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೆ ಈಚೆಗೆ ಮೃತಪಟ್ಟಿದ್ದರು. ಮಹಿಳೆ ಹರ್ಷದಾ ಕುಟುಂಬಸ್ಥರಿಗೆ ಧೈರ್ಯ ತುಂಬಿ, ಸಚಿವರು ವೈಯಕ್ತಿಕ ಪರಿಹಾರ ನೀಡಿದರು.
ನಂತರ, ರುಮೇವಾಡಿ ಸೇತುವೆಯನ್ನು ಪರಿಶೀಲಿಸಿದರು. ಅಲ್ಲಿಂದ ಚಿಕ್ಕಹಟ್ಟಿಹೊಳಿ ಹಾಗೂ ಹಿರೆಹಟ್ಟಿಹೊಳಿ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿ ಮನೆಗಳು ಬಿದ್ದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.