ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಟ್ರ್ಯಾಕ್ಟರ್ ರ‍್ಯಾಲಿಗೆ ನಿರ್ಬಂಧ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ
ಬೆಳಗಾವಿ : ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಟ್ರ್ಯಾಕ್ಟರ್ ರ‍್ಯಾಲಿಗೆ ಬೆಳಗಾವಿ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ರ‍್ಯಾಲಿ, ಹೋರಾಟಗಳಿಗೆ ನಿರ್ಬಂಧ ಹೇರಬಾರದು, ಇದು ಪ್ರಜಾಪ್ರಭುತ್ವ. ಪಂಚಮಸಾಲಿ ಮೀಸಲಾತಿಗಾಗಿ ನಾನು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದೇನೆ ಎಂದರು.
ಈಗ ಕಬ್ಬು ಅರೆಯುವ ಸಂದರ್ಭ ಆಗಿರುವುದರಿಂದ ಟ್ರ್ಯಾಕ್ಟರ್ ಗಳು ಹೆಚ್ಚು ಓಡಾಡುತ್ತಿರುತ್ತವೆ. ಅಧಿವೇಶನದ ವೇಳೆ ಯಾವುದೇ ಅಪಘಾತ, ದುರ್ಘಟನೆ ಆಗಬಾರದು ಅಂತಾ ಮುಂಜಾಗ್ರತೆ ದೃಷ್ಟಿಯಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿರಬಹುದು ಎಂದು ಅವರು ಹೇಳಿದರು.
ನಾನು ಈಗಾಗಲೇ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಜೊತೆ ಮಾತನಾಡಿದ್ದೇನೆ. ಇಂದು ಸಂಜೆ 4 ಗಂಟೆಗೆ ನಾನು, ಸ್ವಾಮೀಜಿ, ಸಿ.ಸಿ.ಪಾಟೀಲ್, ಅರವಿಂದ್ ಬೆಲ್ಲದ ಸೇರಿದಂತೆ ಎಲ್ಲರೂ ಸಭೆ ನಡೆಸುತ್ತಿದ್ದೇವೆ. ಈ ಸಭೆಯಲ್ಲಿ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಪಟ್ಟಂತೆ ನಾನು ಸ್ವಾಮೀಜಿ ಅವರ ಜೊತೆ ಹಾಗೂ ನಮ್ಮ ಸಮಾಜದ ಇತರ ಪಕ್ಷಗಳ ನಾಯಕರ ಜೊತೆಗೂ ನಿರಂತರ ಸಂಪರ್ಕದಲ್ಲಿದ್ದೇನೆ. ಇಂತಹ ಗುರುಗಳು ಸಿಕ್ಕಿದ್ದು ನಮ್ಮ ಪುಣ್ಯ. ನಾಳೆ ನಡೆಯಲಿರುವ ಸಮಾವೇಶದಲ್ಲಿ ನಾನು ಖಂಡಿತವಾಗಿ ಭಾಗಿಯಾಗುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
ನಾನು ಸಚಿವೆ ಆಗಿರುವ ಕಾರಣ ವಿಧಾನಸಭೆ ಕಲಾಪದ ವೇಳೆ ಬಾವಿಗಿಳಿದು ಧರಣಿ ಮಾಡುವುದಕ್ಕೆ ಸಾಧ್ಯವಿಲ್ಲ. ವಿಧಾನಸಭೆಯಲ್ಲಿ ಯಾರಾದರೂ ವಿಷಯ ಪ್ರಸ್ತಾಪಿಸಿದಾಗ ಧ್ವನಿಯಾಗಿ ಇರುವೆ. ನಾನೂ ಹಾಗೂ ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಧ್ವನಿಯಾಗಿ ಇರುತ್ತೇವೆ ಅವರು ಹೇಳಿದರು.