ಅವರ ರಾಜಕೀಯಕ್ಕೆ ರಾಜಕೀಯವಾಗಿಯೇ ಉತ್ತರಿಸುತ್ತೇವೆ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ರಾಜಕೀಯವಾಗಿ ಈ ಪ್ರಕರಣವನ್ನು ಬಳಸುತ್ತಿದ್ದಾರೆ, ನಾವೂ ರಾಜಕೀಯವಾಗಿ ಉತ್ತರಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅದರ ವರದಿಯೇ ಬಂದಿಲ್ಲ. ಈಗಲೇ ತಮ್ಮ ಸಂವಿಧಾನಿಕ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು.
ಮುಂದೆ ಬಂಧನವಾದರೆ ರಾಜಿನಾಮೆ ನೀಡಬೇಕಾಗುತ್ತದೆಯಲ್ಲವೇ ಎನ್ನುವ ಪ್ರಶ್ನೆಗೆ, ಊಹಾಪೋಹದ ಪ್ರಶ್ನೆಗಳಿಗೆಲ್ಲ ನಾನು ಉತ್ತರಿಸುವುದಿಲ್ಲ. ರಾಷ್ಟ್ರದಲ್ಲಿ ಬಿಜೆಪಿಯೇತರ ಪಕ್ಷಗಳ ಸರಕಾರ ಬಂದಾಗಲೆಲ್ಲ ಈ ರೀತಿ ಕಾಡಿಸುವುದು ಹಿಂದಿನಿದಂಲೂ ನಡೆಯುತ್ತಲೇ ಇದೆ. ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ಮಂತ್ರಿಗಳೂ ಮುಖ್ಯಮಂತ್ರಿಗಳ ಬೆನ್ನಿಗೆ ನಿಂತಿದ್ದೇವೆ. ಅವರು ರಾಜಿನಾಮೆ ಕೊಡುವ ಪ್ರಶ್ನೆ ಇಲ್ಲ. ಅವರ ರಾಜಕೀಯಕ್ಕೆ ನಾವೂ ರಾಜಕೀಯವಾಗಿಯೇ ಉತ್ತರ ನೀಡುತ್ತೇವೆ ಎಂದು ಹೆಬ್ಬಾಳಕರ್ ತಿಳಿಸಿದರು.
ಅಂದಿನ ಯಡಿಯೂರಪ್ಪ ಪ್ರಕರಣಕ್ಕೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಗ ಬಿಜೆಪಿಯವರದ್ದೇ ಸರಕಾರವಿತ್ತು. ಅವರ ಪಕ್ಷದವರೇ ಅವರ ಬೆನ್ನಿಗೆ ಚೂರಿ ಹಾಕಿ ಜೈಲಿಗೆ ಕಳಿಸಿದ್ದಾರೆ. ಇದು ಆ ರೀತಿಯ ಪ್ರಕರಣವಲ್ಲ. ಈ ಪ್ರಕರಣದ ಕುರಿತು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ರಾಜಕೀಯವಾಗಿ ಮುಖ್ಯಮಂತ್ರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. 40 ವರ್ಷದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಮಾಡಿದವರು ಸಿದ್ದರಾಮಯ್ಯನವರು. ಅವರ ಮುಖಕ್ಕೆ ಮಸಿ ಬಳಿಯಲು ಹೋದವರ ಕೈಗೆ ಮೊದಲು ಮಸಿ ಬಳಿದಿದೆ. ಜನರು ಅವರನ್ನು ಕ್ಷಮಿಸುವುದಿಲ್ಲ. ಈ ರಾಜ್ಯದ ಜನರು 5 ವರ್ಷ ಸುಭದ್ರ ಆಡಳಿತ ನಡೆಸಲು ಆಶಿರ್ವಾದ ಮಾಡಿದ್ದಾರೆ. ನಾವು 5 ವರ್ಷ ಆಡಳಿತ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.