‘ನಮ್ಮನ್ನು ಕೆಣಕಿದರೆ ಸುಟ್ಟು ಹೋಗುತ್ತೀರಿ’ : ಬಿಜೆಪಿ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ
"ಬಿಜೆಪಿ, ಆರೆಸ್ಸೆಸ್, ಹಿಂದೂ ಮಹಾಸಭಾದವರು ಎಂದಿಗೂ ದಲಿತರ ಪರವಾಗಿ ನಿಲ್ಲುವುದಿಲ್ಲ"

ಮಲ್ಲಿಕಾರ್ಜುನ ಖರ್ಗೆ | PC:x/@kharge
ಬೆಳಗಾವಿ : ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಸಂವಿಧಾನ, ಅಂಬೇಡ್ಕರ್ ಭಾವಚಿತ್ರವನ್ನು ಸುಟ್ಟವರು ನಮಗೆ ಪಾಠ ಮಾಡಬೇಡಿ. ನಾವು ಬೆಂಕಿ ಇದ್ದಂತೆ ನೀವು ನಮ್ಮನ್ನು ಕೆಣಕಿದರೆ ಸುಟ್ಟು ಹೋಗುತ್ತೀರಿ ಎಂದು ಬಿಜೆಪಿ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದರು.
ಮಂಗಳವಾರ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿರುವ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶವನ್ನು ಚರಕ ಸುತ್ತುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಸನ್ಮಾನ ಮಾಡಿದೆ. ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್ ಬರೆದಿರುವ ಸಂವಿಧಾನ ಮನುಸ್ಮೃತಿಯಂತೆ ಇಲ್ಲ, ಇದನ್ನು ಒಪ್ಪಲ್ಲ, ತ್ರಿವರ್ಣ ಧ್ವಜ ಒಪ್ಪಲ್ಲ ಎಂದು ಹೇಳಿದವರು ನೀವುಗಳು. ಸಂಸತ್ತಿನ ಎದುರು ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ್ದು ಇಂದಿರಾ ಗಾಂಧಿ ಕಾಲದಲ್ಲಿ. ಈಗ ಮೋದಿ ಅಂಬೇಡ್ಕರ್ ಪ್ರತಿಮೆಯನ್ನು ಸಂಸತ್ತಿನ ಮೂಲೆಯಲ್ಲಿ ಹಾಕಿದ್ದಾರೆ. ಅಂತಹ ಮನುಷ್ಯ ಸಂವಿಧಾನಕ್ಕೆ ನಮಸ್ಕಾರ ಮಾಡುವ ನಾಟಕ ಮಾಡುತ್ತಾರೆ ಎಂದು ಅವರು ಟೀಕಿಸಿದರು.
ಅಂಬೇಡ್ಕರ್ ವಿಚಾರದಲ್ಲಿ ನಮ್ಮಲ್ಲಿಯೇ ಜಗಳ ಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ಯಾರು ಸೋಲಿಸಿದರು? ಎರಡು ಬಾರಿ ಅಂಬೇಡ್ಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ತಂದವರು ಕಾಂಗ್ರೆಸಿನವರು. ನೆಹರೂ ಹಾಗೂ ಗಾಂಧಿಜಿ ರಾಜ್ಯಸಭಾ ಸದಸ್ಯರಾಗಿದ್ದ ಎಂ.ಆರ್.ಜೈಕರ್ ಅವರಿಂದ ರಾಜೀನಾಮೆ ಕೊಡಿಸಿ ಅಂಬೇಡ್ಕರ್ ಅವರನ್ನು ಆರಿಸಲಾಗಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಬಿಜೆಪಿ ಹಾಗೂ ಆರೆಸ್ಸೆಸ್ ನವರು 50 ವರ್ಷಗಳ ಕಾಲ ತಮ್ಮ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ರಾಹುಲ್ ಗಾಂಧಿ ಸಂವಿಧಾನ ಪುಸ್ತಕ ಹಿಡಿದು ಹೋರಾಟ ಆರಂಭಿಸಿದ ನಂತರ, ಈಗ ಸಂವಿಧಾನ ರಕ್ಷಿಸಬೇಕು ಎಂದು ಮೋದಿ ಹೊರಟಿದ್ದಾರೆ. ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ ಜೋಡೋ ಯಾತ್ರೆ ಮಾಡಿದ್ದಾರೆ. ನಿಮ್ಮಿಂದ ವಿಭಜನೆ ಹೊರತಾಗಿ ಏನು ಮಾಡಲು ಸಾಧ್ಯ? ಅವರು ಪ್ರಶ್ನಿಸಿದರು.
ಗಾಂಧಿಜಿ ಅವರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಬೇಡಿ ಎಂದು ಜನಸಂಘದ ಸಂಸ್ಥಾಪಕ ಶಾಮಾಪ್ರಸಾದ್ ಮುಖರ್ಜಿ, ಹೆಡಗೆವಾರ್ ಹೇಳುತ್ತಿದ್ದರು. ಗಾಂಧಿಜಿ ಚಳವಳಿ ಹತ್ತಿಕ್ಕದಿದ್ದರೆ ದೊಡ್ಡ ಸಮಸ್ಯೆಯಾಗುತ್ತದೆ ಎಂದು ಬ್ರಿಟಿಷ್ ಗವರ್ನರ್ಗೆ ಪತ್ರ ಬರೆದಿದ್ದರು. ಬ್ರಿಟಿಷರ ಸರಕಾರದಲ್ಲಿ ನೌಕರಿ ಪಡೆಯಿರಿ, ನಿಮ್ಮ ಮಕ್ಕಳನ್ನು ಪಾಲನೆ ಮಾಡಿ ಎಂದು ಹೇಳಿದವರು ಹೆಡಗೆವಾರ್ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಗಾಂಧಿಯನ್ನು ಗುಂಡಿಟ್ಟು ಕೊಂದ ಗೋಡ್ಸೆ, ಸಾರ್ವಕರ್ ಶಿಷ್ಯ. ಮೋದಿ ಹಾಗೂ ಅಮಿತ್ ಶಾ ಇಬ್ಬರು ಗುಜರಾತಿನವರು. ಗಾಂಧಿ ಗುಜರಾತಿನಲ್ಲಿ ಹುಟ್ಟಿದ್ದರೂ ಇವರು ಗಾಂಧಿಯನ್ನು ಅನುಸರಿಸುವುದಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುತ್ತಾರೆ. ಸಂಸತ್ತಿನಲ್ಲಿ ಅಂಬೇಡ್ಕರ್ ಅವರಿಗೆ ಅಮಿತ್ ಶಾ ಅವಮಾನ ಮಾಡಿದಕ್ಕೆ ನಾವು ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಬಿಜೆಪಿ, ಆರೆಸ್ಸೆಸ್, ಹಿಂದೂ ಮಹಾಸಭಾದವರು ಎಂದಿಗೂ ದಲಿತರ ಪರವಾಗಿ ನಿಲ್ಲುವುದಿಲ್ಲ. ಬಡವರು, ರೈತರು, ಕೂಲಿ ಕಾರ್ಮಿಕರು ಕಷ್ಟದಲ್ಲಿ ಬದುಕುತ್ತಿದ್ದರೂ ಈ ಸರಕಾರಕ್ಕೆ ಅವರ ಬಗ್ಗೆ ಚಿಂತೆಯಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಆಲೋಚನೆ ಇಲ್ಲ, ರಸಗೊಬ್ಬರ ಬೆಲೆ ಇಳಿಸುವ ಯೋಚನೆ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಡಿ.27ರಂದು ನಡೆಯಬೇಕಿದ್ದ ಈ ಸಮಾವೇಶ ಮುಂದೂಡಲಾಗಿತ್ತು. 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಮಂತ್ರಿಯಾಗಬೇಕಾಗಿತ್ತು. ಆದರೆ ಅವರು ಪ್ರಧಾನಿ ಹುದ್ದೆಯನ್ನು ಸ್ವೀಕರಿಸದೇ ದೇಶಕ್ಕೆ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಭಾವಿಸಿ ಹುದ್ದೆ ತ್ಯಾಗ ಮಾಡಿದರು. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಏನೇಕ ಕ್ರಾಂತಿಕಾರಕ ಕಾಯ್ದೆ ತರಲಾಯಿತು ಎಂದು ಅವರು ಹೇಳಿದರು.
ಈ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ರಾಜಕೀಯ ಅಧಿಕಾರ ತ್ಯಾಗ ಮಾಡಿದ್ದಾರೆ. ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಆರ್ಟಿಐ, ಆಹಾರ ಭದ್ರತಾ ಕಾಯ್ದೆ, ಅರಣ್ಯ ಹಕ್ಕು, ಶೈಕ್ಷಣಿಕ ಹಕ್ಕು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ತಂದಿದ್ದಾರೆ. ಬಡವರಿಗಾಗಿ ಎನ್ಡಿಎ ಸರಕಾರ ಯಾವುದಾದರೂ ಕಾರ್ಯಕ್ರಮ ನೀಡಿದೆಯೇ? ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
1989ರಲ್ಲಿ ನಾನು ಬ್ಲಾಕ್ ಮಟ್ಟದ ಅಧ್ಯಕ್ಷನಾಗಿದ್ದೆ. ಇಂದು ಎಲ್ಲ ನಾಯಕರು ಸೇರಿ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇದು ಕಾಂಗ್ರೆಸ್ ಗುಣ. ಗಾಂಧಿಜಿ ಕಾಂಗ್ರೆಸ್ ಅಧ್ಯಕ್ಷರಾಗಿ 100 ವರ್ಷವಾಗಿದೆ. ಈ ಅವಧಿಯಲ್ಲಿ ಆ ಸ್ಥಾನವನ್ನು ನಮ್ಮ ನಾಯಕರು ನನಗೆ ನೀಡಿರುವುದು ನನ್ನ ಪುಣ್ಯ. ಕಾಂಗ್ರೆಸ್ ಪಕ್ಷ ಹಾಗೂ ಸರಕಾರ ಬೆಳಗಾವಿಯಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಿತ್ತು. ದೇಶದಲ್ಲಿ ಎಲ್ಲಾದರೂ ಕಾಂಗ್ರೆಸ್ ಗಟ್ಟಿಯಾಗಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ ಎಂದು ಅವರು ಹೇಳಿದರು.
ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರು, ಶಾಸಕರು, ಅನ್ಯ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಹಿರಿಯ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಬೆಳಗಾವಿ ಹಾಗೂ ಈ ಭಾಗ ಕಿತ್ತೂರು ರಾಣಿ ಚನ್ನಮ್ಮ ಅವರ ಭೂಮಿ. ಇಲ್ಲಿ ಹುಟ್ಟಿ ದೇಶದ ಸ್ವಾಭಿಮಾನ ಹಾಗೂ ರಕ್ಷಣೆಗೆ ಹೋರಾಟ ಮಾಡಿದ್ದರು. ಅವರಂತೆ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಹೋರಾಟ ಮಾಡುವ ಶಕ್ತಿಶಾಲಿ ಮಹಿಳೆ ಎಂದರೆ ಪ್ರಿಯಾಂಕಾ ಗಾಂಧಿ. ಎಷ್ಟೇ ಕಷ್ಟ ಬಂದರೂ ಎದೆಗುಂದದೇ ದೇಶದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಈ ಗಾಂಧಿ ಕುಟುಂಬದ ಬಗ್ಗೆ ಅಮಿತ್ ಶಾ, ಮೋದಿ ಹಾಗೂ ಅವರ ಚಮಚಾಗಳು ಟೀಕೆ ಮಾಡುತ್ತಾರೆ.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ