ಬಾಣಂತಿಯರ ಸಾವು ಪ್ರಕರಣ : ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯ
ಆರ್.ಅಶೋಕ್
ಬೆಳಗಾವಿ : ‘ರಾಜ್ಯದ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಬಾಣಂತಿಯರ ಸಾವು ಪ್ರಕರಣ, ಕಳಪೆ ಔಷಧ ಪೂರೈಕೆ ಸಂಬಂಧ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ‘ಸರಕಾರಿ ಆಸ್ಪತ್ರೆಗಳಲ್ಲಿ ಟೆಂಡರ್ ವಿಳಂಬದಿಂದಾಗಿ ಔಷಧಗಳ ಪೂರೈಕೆ ಸ್ಥಗಿತಗೊಂಡಿದ್ದು, ವೈದ್ಯರ ಕೊರತೆ ನಕಲಿ ವೈದ್ಯರ ಹಾವಳಿ’ ಕುರಿತು ಬೆಳಕು ಚೆಲ್ಲಿದ ಅವರು, ‘ಜನರಿಗೆ ಆರೋಗ್ಯ ಭಾಗ್ಯ ಕಲ್ಪಿಸಬೇಕಾದ ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೆ ತುತ್ತಾಗಿದೆ. ಬಾಣಂತಿಯರ ಸಾವು ಪ್ರಕರಣ ಬಳ್ಳಾರಿ ಮಾತ್ರವಲ್ಲ ರಾಯಚೂರು, ಬೆಳಗಾವಿ, ಚಿತ್ರದುರ್ಗದಲ್ಲೂ ನಡೆದಿದೆ ಎಂದು ಉಲ್ಲೇಖಿಸಿದರು.
‘ಘಟನೆಯ ಬಗ್ಗೆ ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಾಗಿ ಔಷಧ ನಿಯಂತ್ರಣ ಇಲಾಖೆಯನ್ನು ಬಲಿಪಶು ಮಾಡಲಾಗಿದೆ. ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಆದರೆ, ಆರೋಗ್ಯ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಬಾಣಂತಿಯರ ಸಾವು ಪ್ರಕರಣದಲ್ಲಿ 2ಲಕ್ಷ ರೂ.ಪರಿಹಾರ ನೀಡಲಾಗಿದೆ. ಆದರೆ, ಕೇರಳದ ವಯನಾಡಿನಲ್ಲಿ ಕರ್ನಾಟಕದ ಆನೆ ತುಳಿತಕ್ಕೆ ಸಿಕ್ಕಿ ಸಾವನ್ನಪ್ಪಿದವರಿಗೆ 15 ಲಕ್ಷ ರೂ.ಪರಿಹಾರ ನೀಡಲಾಗಿದೆ ಎಂದು ಅಶೋಕ್ ಆರೋಪಿಸಿದರು.
ರಾಜ್ಯ ಸರಕಾರ ವೈದ್ಯಕೀಯ ಮಾಫಿಯಾಕ್ಕೆ ಸಿಲುಕಿದ್ದು, ವೈದ್ಯರು ಮತ್ತು ಸಿಬ್ಬಂದಿ ಕೊರತೆ ಹೆಚ್ಚಿದೆ. ಬಾಣಂತಿಯರಿಗೆ ಐವಿ ದ್ರಾವಣ ಕೊಟ್ಟ ಬಳಿಕ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅವಧಿ ಮೀರಿದ ಔಷಧಗಳು ನಾವು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಕಂಡು ಬಂದಿತ್ತು. ಮೃತ ಬಾಣಂತಿಯರ ಸ್ಥಿತಿ ನೋಡಿದಾಗ ಸರಕಾರಿ ಆಸ್ಪತ್ರೆಗೆ ಬಾಣಂತಿಯರ ಹೋಗಬಾರದವ್ವಾ ಎಂಬ ಪರಿಸ್ಥಿತಿ ಆಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ಎನ್.ಎಚ್.ಕೋನರೆಡ್ಡಿ, ‘ಸರಕಾರಿ ಆಸ್ಪತ್ರೆಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರೆ ಹೇಗೆ? ಸದನದಲ್ಲಿ ಈ ರೀತಿಯಲ್ಲಿ ಚರ್ಚೆ ನಡೆದರೆ ಜನರಿಗೆ ತಪ್ಪು ಸಂದೇಶ ಹೊರ ಹೋಗುತ್ತದೆ. ನಮ್ಮ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಅತ್ಯುತ್ತಮ ಆಸ್ಪತ್ರೆಗಳಿದ್ದು, ಜನ ಸರಕಾರಿ ಆಸ್ಪತ್ರೆಗಳನ್ನೇ ಆಶ್ರಯಿಸಿದ್ದಾರೆ. ಸರಕಾರ ಆಸ್ಪತ್ರೆಗಳ ಸುಧಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಲಹೆ ನೀಡಲಿ’ ಎಂದು ಸೂಚಿಸಿದರು.
ಬಳಿಕ ಮಾತು ಮುಂದುವರಿಸಿದ ಅಶೋಕ್, ‘ಔಷದ ಕಳಪೆ ಇದೆ ಎಂದು ಆರು ತಿಂಗಳ ಹಿಂದೆಯೇ ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ಔಷಧ ಪೂರೈಕೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಉಗ್ರಾಣದಲ್ಲಿ ಈ ಸಂಸ್ಥೆಯಿಂದ ಪೂರೈಕೆಯಾದ ಔಷಧಿ ವಿತರಣೆ ರದ್ದು ಮಾಡುವಂತೆ ಸೂಚಿಸಲಾಗಿತ್ತು. ಆದರೂ ಅದೇ ಐವಿ ದ್ರಾವಣವನ್ನು ಪೂರೈಕೆ ಮಾಡಿದ್ದರ ಪರಿಣಾಮ ಬಾಣಂತಿಯರ ಸಾವು ಸಂಭವಿಸಿದೆ ಎಂದು ಅವರು ದೂರಿದರು.