ಕಾವೇರಿ ನದಿಗೆ ಕಲುಷಿತ ಸೇರ್ಪಡೆ | ವರದಿ ಸಲ್ಲಿಸಲು ತಜ್ಞರ ಸಮಿತಿ ರಚನೆ : ಸಚಿವ ಈಶ್ವರ್ ಖಂಡ್ರೆ
ಬೆಳಗಾವಿ : ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲೀನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ಪರಿಸರಕ್ಕೆ ಆಗಿರುವ ಅನಾಹುತದ ತಡೆಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು 2024ರ ಜೂನ್‍ನಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ ಎಂದು ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಸದಸ್ಯ ಎಂ.ಪಿ.ಕುಶಾಲಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತಜ್ಞರ ಸಮಿತಿಯ ಸದಸ್ಯರು ಈಗಾಗಲೇ ಎರಡು ಬಾರಿ ಸಭೆ ನಡೆಸಿದ್ದಾರೆ. ತಜ್ಞರ ಸಮಿತಿಯು ಜುಲೈ 4ರಂದು ಮೈಸೂರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾವೇರಿ ನದಿಗೆ ಭೇಟಿ ನೀಡಿ ನದಿಯ ಮಾಲಿನ್ಯದ ಬಗ್ಗೆ ಸದಸ್ಯರಿಂದ ವ್ಯಕ್ತವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆದಿದೆ ಎಂದರು.
ಕಾವೇರಿ ನದಿಯ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳಿಂದ ಮಾಹಿತಿ ವಿವರಗಳನ್ನು ಸಮಿತಿಯು ಪಡೆದು ಭಾಗೀದಾರರೊಂದಿಗೆ ಸಮಾಲೋಚನೆಗಳನ್ನು ನಡೆಸಿರುತ್ತದೆ. ತಜ್ಞರ ಸಮಿತಿಯು ಪರಸ್ಪರ ಪರ್ಯಾಲೋಚನೆ ನಡೆಸಿದ ತರುವಾಯ ಸದಸ್ಯರಿಂದ ವ್ಯಕ್ತವಾದ ಸಲಹೆ ಮತ್ತು ಅಭಿಪ್ರಾಯಗಳನ್ನು ಪರಿಶೀಲಿಸಿ ಹಾಗೂ ಪ್ರಾದೇಶಿಕ ಅಧಿಕಾರಿಗಳಿಂದ ಪಡೆದ ಮಾಹಿತಿಯನ್ನು ಪರಾಮರ್ಶಿಸಿ ಅಧ್ಯಯನ ನಡೆಸಿ ವಿವರವಾದ ವರದಿ ತಯಾರಿಸಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.
ತಜ್ಞರ ಸಮಿತಿಯು ಈಗಾಗಲೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಕ ಸರಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, ಈ ವರದಿಯನ್ವಯ ನದಿಯ ರಕ್ಷಣೆಗಾಗಿ ಸರಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ, ಕಾವೇರಿ ನದಿ ನೀರಿನ ಮಾಲಿನ್ಯ ನಿಯಂತ್ರಿಸಲು ಹಾಗೂ ತಡೆಯಲು ತಾಂತ್ರಿಕ ಸಮಿತಿಯು ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಿಯಾಯೋಜನೆಗಳ ಬಗ್ಗೆ ಹಾಗೂ ಮಾಡಲಾಗಿರುವ ಅವಲೋಕನಗಳು, ಶಿಫಾರಸುಗಳು ಹಾಗೂ ನೀಡಿರುವ ಸಲಹೆ ಮತ್ತು ಮಾರ್ಗೋಪಾಯಗಳ ಬಗ್ಗೆ ಭಾಗೀದಾರ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರ್ಯಾಲೋಚಿಸಿ ಮಾಲಿನ್ಯ ತಡೆಗೆ ಸಮಗ್ರ ಕಾರ್ಯನೀತಿಯನ್ನು ರೂಪಿಸಬೇಕಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.