ಬಾಲಕಿಯ ಸಂಕಷ್ಟಕ್ಕೆ ತಕ್ಷಣ ಸ್ಪಂದನೆ : ಮಾನವೀಯತೆ ಮೆರೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ತನ್ನ ಓದುವ ಹುಮ್ಮಸ್ಸಿಗೆ ಅಡ್ಡಿಯಾಗಿರುವ ಸ್ವಂತ ತಂದೆಯ ಕಿರುಕುಳ ತಾಳಲಾರದೆ ತಮ್ಮ ಬಳಿಗೆ ಬಂದ 12 ವರ್ಷದ ಬಾಲಕಿಯ ಕಷ್ಟಕ್ಕೆ ತಕ್ಷಣ ಸ್ಪಂದಿಸಿ ಪರಿಹಾರ ಒದಗಿಸುವ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾನವೀಯತೆ ತೋರಿದ್ದಾರೆ.
ಶುಕ್ರವಾರ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸಿ ಮನೆಗೆ ಆಗಮಿಸಿದಾಗ ಬಾಲಕಿಯೊಬ್ಬಳು ತನ್ನ ಅಜ್ಜಿಯ ಜೊತೆಗೆ ನಿಂತಿದ್ದನ್ನು ಗಮನಿಸಿದರು.
ಹಿರೇಬಾಗೇವಾಡಿಯವಳಾದ ಬಾಲಕಿಯ ತಂದೆ ನಿತ್ಯ ಕುಡಿದು ಬಂದು ಬಾಲಕಿಗೆ ಮತ್ತು ಆಕೆಯ ತಾಯಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ತಾಯಿ ತವರು ಮನೆ ಸೇರಿದಳು. ಆದರೆ, ಹಿರೇಬಾಗೇವಾಡಿಯ ಖಾಸಗಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಬಾಲಕಿ ಓದು ಬಿಟ್ಟು ಹೋಗಲು ಒಪ್ಪಲಿಲ್ಲ. ಆದರೆ ತಂದೆಯ ಹಿಂಸೆಯನ್ನು ಸಹಿಸುವುದೂ ಸಾಧ್ಯವಿರಲಿಲ್ಲ.
ಹಾಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಹೋದರೆ ಏನಾದರೂ ಪರಿಹಾರ ಸಿಗಬಹುದು ಎಂದು ಅಜ್ಜಿಯನ್ನು ಕರೆದುಕೊಂಡು ಬಂದಿದ್ದಳು. ಅದಾಗಲೇ ಯುವ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಬಾಲಕಿಯ ಕಷ್ಟ ಆಲಿಸುತ್ತಿದ್ದರು. ಎಲ್ಲೇ ಆದರೂ ಹಾಸ್ಟೆಲ್ ನಲ್ಲಿ ಇದ್ದು ಓದುತ್ತೇನೆ. ಆದರೆ ಮನೆಯಲ್ಲಿ ಇರಲು ಸಾಧ್ಯವಿಲ್ಲ, ಓದನ್ನು ನಿಲ್ಲಿಸುವುದಿಲ್ಲ ಎಂದು ಬಾಲಕಿ ಸಚಿವರ ಬಳಿ ಅಳಲು ತೋಡಿಕೊಂಡಳು.
ತಕ್ಷಣ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾಗರಾಜ ಅವರಿಗೆ ಕರೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ತಮ್ಮ ಇಲಾಖೆಯ ಸವದತ್ತಿ ಬಾಲಕಿಯರ ವಸತಿ ನಿಲಯದಲ್ಲಿ ಬಾಲಕಿ ಉಳಿದುಕೊಳ್ಳಲು ಮತ್ತು ವಿದ್ಯಾಭ್ಯಾಸ ಮುಂದುವರಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬಾಲಕಿಗೆ ಅಗತ್ಯವಾದ ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಲು ಆರ್ಥಿಕ ನೆರವನ್ನೂ ಒದಗಿಸಿದರು.
ಈ ಬಾಲಕಿ ನನ್ನ ಮಗಳಿದ್ದಂತೆ, ಅವಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಬಾಲಕಿಯನ್ನು ಸಂತೈಸಿ ನಿನ್ನ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಉತ್ತಮವಾಗಿ ಓದಿ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಹಾರೈಸಿದರು.
ಕೆಲವೇ ಹೊತ್ತಿನಲ್ಲಿ ಮಕ್ಕಳ ರಕ್ಷಣಾಲಯದ ಸಿಬ್ಬಂದಿಗಳು , ಬಾಲಕಿಯನ್ನು ಸವದತ್ತಿ ವಸತಿ ನಿಲಯಕ್ಕೆ ಸೇರಿಸಲು ಕ್ರಮ ತೆಗೆದುಕೊಂಡರು. ಬಾಲಕಿಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಲಾಗುವುದು. ವರ್ಷದ 365 ದಿನವೂ ಆಕೆಗೆ ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.