‘ಗೃಹಲಕ್ಷ್ಮೀ ಯೋಜನೆ’ ಮಹಿಳೆಯರಿಗೆ ಜೀವನಾಧಾರವಾಗಬೇಕು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆ, ಮಹಿಳೆಯರ ಜೀವನಕ್ಕೆ ಆಧಾರ ಆಗಬೇಕು ಎಂಬುದೇ ನನ್ನ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಶನಿವಾರ ಹಿರೇಬಾಗೇವಾಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ನಡೆದ ಮಹಿಳಾ ವಿಚಾರಗೋಷ್ಠಿ ಹಾಗೂ ಸಾಮಾನ್ಯ ಸಹಾಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಿಂದ ಬರುವ ಹಣವನ್ನು ಸೇರಿಸಿ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂಬುದೇ ನನ್ನ ಬಯಕೆ ಎಂದರು.
ಜೀವನ ಅಭಿವೃದ್ಧಿ ಆಗಬೇಕು, ಮಕ್ಕಳಿಗೆ ಶಿಕ್ಷಣ ಸಿಗಬೇಕು, ಎಲ್ಲರಿಗೂ ಆರೋಗ್ಯ ಸಿಗಬೇಕು ಎಂಬುದೇ ಗೃಹಲಕ್ಷ್ಮೀ ಯೋಜನೆಯ ಮೂಲ ಉದ್ದೇಶ. ಮಹಿಳೆಯರು ತಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಆರ್ಥಿಕ ಸಬಲೀಕರಣದ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು, ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲೂ ಮುಂದೆ ಬರುತ್ತಿದ್ದಾಳೆ, ಎಲ್ಲ ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ, 25 ವರ್ಷದ ಹಿಂದೆ ಮಹಿಳೆಯನ್ನು ನೋಡುವ ದೃಷ್ಟಿ ಬೇರೆ ಇತ್ತು, ಇಂದು ಅದು ಬದಲಾಗಿದೆ. ಜಗತ್ತನ್ನೇ ಗೆಲ್ಲುವ ಛಲ ಮಹಿಳೆಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ಪಾಟೀಲ್, ಮುಖಂಡರಾದ ಸುರೇಶ್ ಇಟಗಿ, ಸತೀಶ್ ನಾಯ್ಕ್, ಲಕ್ಷ್ಮೀ ಅರಿಬೆಂಚಿ, ಪರ್ವತಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.