ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ | ಸಿ.ಟಿ.ರವಿ ವಿರುದ್ಧ ಸದನದ ಒಳಗೆ-ಹೊರಗೆ ವ್ಯಾಪಕ ಆಕ್ರೋಶ
ಬೆಳಗಾವಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ವಿರೋಧಿಸಿ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ವೇಳೆ ಬಿಜೆಪಿ ಸದಸ್ಯ ಸಿ.ಟಿ.ರವಿ ನೀಡಿದ್ದಾರೆ ಎಂದು ಆರೋಪಿಸಲಾದ, ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆಯು ಆಡಳಿತ ಮತ್ತು ವಿಪಕ್ಷದ ನಡುವೆ ತೀವ್ರ ವಾಗ್ವಾದ, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಆಡಳಿತ ಪಕ್ಷದ ಸದಸ್ಯರು, ಸಿ.ಟಿ.ರವಿ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಿದ್ದಾರೆ.
ಸಿ.ಟಿ.ರವಿ ಕಾರಿಗೆ ಮುತ್ತಿಗೆ : ಈ ಮಧ್ಯೆ ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ಬಿಜೆಪಿ ಶಾಸಕ ಸಿ.ಟಿ.ರವಿ ಕಾರಿಗೆ, ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುತ್ತಿಗೆ ಹಾಕಿ ಧಿಕ್ಕಾರದ ಘೋಷಣೆ ಕೂಗಿದ್ದು ನಡೆಯಿತು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.
ಆರೋಪ-ಪ್ರತ್ಯಾರೋಪ: ಅಮಿತ್ ಶಾ ಹೇಳಿಕೆ ಖಂಡಿಸಿ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗದ್ದಲ ಉಂಟಾಯಿತು. ಈ ವೇಳೆ ಸದನವನ್ನು ಸಭಾಪತಿ ಮುಂದೂಡಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ವಿರುದ್ಧ ಸಿ.ಟಿ.ರವಿ, ‘ಮಾದಕ ದ್ರವ್ಯದ ವ್ಯಸನಿ’ ಎಂದು ಛೇಡಿಸಿದರು. ಇದಕ್ಕೆ ಆಕ್ಷೇಪಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ರಸ್ತೆ ಅಪಘಾತದಲ್ಲಿ ಕಾರು ಹತ್ತಿಸಿ ಇಬ್ಬರ ಕೊಲೆಗೈದ ಕೊಲೆಗಾರ’ ಎಂದು ದೂರಿದ್ದರಿಂದ ಕೆರಳಿದ ರವಿ, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ, ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ತೀವ್ರ ಮುಜುಗರಕ್ಕೆ ಸಿಲುಕಿದ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದ ಪ್ರಸಂಗವು ನಡೆಯಿತು. ‘ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿಲ್ಲವೇ? ನಿಮ್ಮ ತಾಯಿನೂ ಓರ್ವ ಹೆಣ್ಣು ಅಲ್ಲವೇ? ಎಂದು ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಕೊಠಡಿಗೆ ತೆರಳಿರುವ ಸಚಿವೆ ಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ಸದಸ್ಯರು ದೂರು ನೀಡಲು ಮುಂದಾಗಿದ್ದಾರೆ.
ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ: ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ ಸಭಾಪತಿ ಹಾಗೂ ಪೊಲೀಸ್ ಠಾಣೆಗೂ ದೂರು ಸಲ್ಲಿಸಿರುವ ಮಾಹಿತಿ ದೊರೆತಿದ್ದು, ಪೊಲೀಸರು ಈ ಕ್ರಿಮಿನಲ್ ಅಪರಾಧ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ. ರವಿ, ಅವಾಚ್ಯ ಪದ ಬಳಸಿದ್ದಾರೆಂದು ಹಲವು ಸದಸ್ಯರು ಹೇಳುತ್ತಿದ್ದು, ತಾನು ಪರಿಷತ್ತಿನಲ್ಲಿ ಇರಲಿಲ್ಲ. ಇಂತಹ ಪದಪ್ರಯೋಗದಿಂದ ಸಚಿವೆ ಹೆಬ್ಬಾಳ್ಕರ್ ಮನನೊಂದಿದ್ದು, ಇಂತಹ ಪದಬಳಕೆ ಒಂದು ರೀತಿಯ ಲೈಂಗಿಕ ದೌರ್ಜನ್ಯವಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ