ಬೆಳಗಾವಿ | ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ, ಪ್ರಕರಣ ದಾಖಲು
ಬೆಳಗಾವಿ : ಬೆಳಗಾವಿ ಸುವರ್ಣ ಸೌಧದಲ್ಲಿ ಡಿ.19ರಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಸಿಟಿ ರವಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಹಲ್ಲೆಕೋರರು ಅವರನ್ನು ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು ಎಂದು ಆರೋಪಿಸಿ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಭಾರೀ ಹೈಡ್ರಾಮಾ ನಡೆದಿತ್ತು. ಈ ವೇಳೆ ವಿಧಾನಸೌಧದ ಬಳಿ ಕೆಲವರಿಂದ ರವಿ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಲಾಗಿದೆ.
ಖಾನಾಪುರ ಪೊಲೀಸ್ ಠಾಣೆಗೆ ಸಿ.ಟಿ ರವಿ ಲಿಖಿತ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಹಿರೇಬಾಗೇವಾಡಿ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಬೆನ್ನಲ್ಲೇ ಬೆಳಗಾವಿ ಹಿರೇಬಾಗೇವಾಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.