ನನಗೆ ಏನೂ ಆಗುವುದಿಲ್ಲ; ನನ್ನ ಭವಿಷ್ಯದ ಬಗ್ಗೆ ಚಿಂತೆ ಬೇಡ: ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ: ನನಗೆ ಏನೂ ಆಗುವುದಿಲ್ಲ. ಯಾರೂ ಆತಂಕಪಡಬೇಡಿ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತಿಸಬೇಡಿ ಎಂದು ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಉಚ್ಚಾಟನೆಗೆ ಆಗ್ರಹಿಸಿ ಬಿಜೆಪಿಯ ಕೆಲವು ನಾಯಕರು ಹೋರಾಟ ಮಾಡುತ್ತಿರುವ ಕುರಿತ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
"ಬಿಜೆಪಿಯಿಂದ ಉಚ್ಚಾಟನೆ ಖಚಿತ. ಯತ್ನಾಳ್ ಗೆ ನೋಟಿಸ್ ಕೊಡಲಾಗಿದೆ' ಎಂದು ಮಾಧ್ಯಮದಲ್ಲಿ ವರದಿ ಬರುತ್ತಿವೆ. ಹಲವಾರು ವರ್ಷಗಳಿಂದ ಇದು ಬರುತ್ತಲೇ ಇದೆ. ಆದರೆ, ಯಾಕೆ ಏಕೆ ಉಚ್ಚಾಟನೆ ಮಾಡಿಲ್ಲ ಎಂದು ಮಾಧ್ಯಮಗಳಲ್ಲಿ ವಿಶೇಷ ಕಾರ್ಯಕ್ರಮ ಮಾಡಿ ಎಂದು ಯತ್ನಾಳ್ ವ್ಯಂಗ್ಯವಾಡಿದರು.
ವಕ್ಪ್ ವಿರುದ್ಧ ಜನ ಜಾಗೃತಿ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಪ್ರವಾಸ ಮುಗಿಸಿದ್ದು, ಕಿತ್ತೂರು ಕರ್ನಾಟಕ ಪ್ರವೇಶ ಮಾಡಿದ್ದೇವೆ. ಸೋಮವಾರ ನಾವೆಲ್ಲ ದಿಲ್ಲಿಗೆ ಹೋಗಿ. ವಕ್ಫ್ ಬಗ್ಗೆ ವರದಿ ಕೊಡುತ್ತೇವೆ. ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಯತ್ನಾಳ್ ಹೇಳಿದರು.
ಬಿಜೆಪಿಯ ಎಲ್ಲ ನಾಯಕರು ದಿಲ್ಲಿಗೆ ಹೊರಟಿದ್ದೇವೆ. ಬೇರೆ ಬೇರೆ ವಿಮಾನದಲ್ಲಿ ಹೋಗಿ ದಿಲ್ಲಿಯಲ್ಲಿ ಸೇರುತ್ತೇವೆ. ಹಾಗೆಂದು ನಮ್ಮ ತಂಡದಲ್ಲಿ ಒಡಕು ಮೂಡಿದೆ ಎಂದು ಬಿಂಬಿಸಬೇಡಿ ಎಂದರು.