ಅಧಿವೇಶನದ ಮೊದಲ ದಿನವೇ ವಕ್ಫ್ ಆಸ್ತಿ ಗದ್ದಲ, ಜಟಾಪಟಿ
ಬೆಳಗಾವಿ(ಸುವರ್ಣ ವಿಧಾನಸೌಧ) : ಚಳಿಗಾಲದ ಅಧಿವೇಶನದ ಮೊದಲ ದಿನವೇ ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾದ ಪ್ರಸಂಗ ವಿಧಾನ ಪರಿಷತ್‍ನಲ್ಲಿ ಸೋಮವಾರ ನಡೆಯಿತು.
ಈ ವೇಳೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘1913ರ ಹೊತ್ತಿನಲ್ಲಿ ವಕ್ಫ್ ಮಂಡಳಿಗೆ ರೂಪುರೇಷೆ ಆರಂಭವಾಯಿತು. ಸ್ವಾತಂತ್ರ್ಯ ನಂತರ ಸರಕಾರವೇ ಇದಕ್ಕೆ ಹೆಚ್ಚು ಮಾನ್ಯತೆ ಹಾಗೂ ಪರಮಾಧಿಕಾರನ್ನು ನೀಡಿತ್ತು. ಹಾಗಾಗಿ ಈಗ ವಕ್ಫ್ ಮಂಡಳಿ ಸರಕಾರವನ್ನೂ ಮೀರಿಸುವ ಹಂತಕ್ಕೆ ಬೆಳೆದು ನಿಂತಿದೆ. ಇದು ಸಂವಿಧಾನಿಕ ಮಂಡಳಿಯಲ್ಲ’ ಎಂದು ಪ್ರತಿಪಾದಿಸಿದರು.
ವಕ್ಫ್ ನಿಂದ ರೈತರಿಗೆ, ದಲಿತರಿಗೆ ಅನ್ಯಾಯವಾಗುತ್ತಿದೆ. ದೇವಾಲಯ, ಚರ್ಚ್‍ಗಳೆಲ್ಲಾ ವಕ್ಫ್ ಆಸ್ತಿಗಳಾಗುತ್ತಿವೆ. ವಕ್ಫ್ ಮಂಡಳಿ ನೀಡಿರುವ ಪರಮಾಧಿಕಾರನ್ನು ಸರಕಾರ ಹಿಂಪಡೆಯಬೇಕು ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ‘ವಿಪಕ್ಷಗಳು ವಕ್ಫ್ ವಿಚಾರವನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಶಾಂತಿ ಉಂಟು ಮಾಡಲು ಹೊರಟಿವೆ. ಜನ ನೆಮ್ಮದಿಯಿಂದ ಬದುಕುತ್ತಿರುವುದನ್ನು ವಿಪಕ್ಷಗಳು ಸಹಿಸುತ್ತಿಲ್ಲ. ಬಿಜೆಪಿಗೆ ಧರ್ಮ ಧರ್ಮಗಳ ನಡುವೆ ವಿಷ ಬಿತ್ತುವುದೇ ನಿತ್ಯದ ಕೆಲಸವಾಗಿದೆ’ ಎಂದು ತಿರುಗೇಟು ನೀಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ನಮ್ಮ ಆಸ್ತಿಯನ್ನು ನಮಗೆ ಕೊಟ್ಟು, ನಮ್ಮನ್ನು ಶಾಂತಿಯಿಂದ ಬದುಕಲು ಬಿಡಿ ಎಂದು ಗರಂ ಆದರು.
ಅದಕ್ಕೆ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಿ, ಮೇಲ್ಮನೆಯನ್ನು ಚಿಂತಕರ ಛಾವಡಿ ಎನ್ನಲಾಗುತ್ತದೆ. ಇಲ್ಲಿ ಎಲ್ಲ ವಿಷಯ ಚರ್ಚೆ ಆಗುವ ಮೂಲಕ ಪರಿಹಾರ ಕಂಡುಕೊಳ್ಳಬೇಕೆ ಹೊರತು ಗದ್ದಲ ಸೃಷ್ಠಿಸಿ ಸಮಾಜಕ್ಕೆ ತಪ್ಪು ಸಂದೇಶ ಹೋಗುವಂತೆ ಆಗಬಾರದು. ವಕ್ಫ್ ವಿಚಾರಕ್ಕೆ ಚರ್ಚೆ ನಡೆಸಿ, ಹಿಡನ್ ಅಜೆಂಡಾಗಳನ್ನು ಮುಂದೆ ತರಬೇಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ವಿಪಕ್ಷದ ಸದಸ್ಯರು ಗದ್ದಲ ನಡೆಸಿದರು.