ಪಂಚಮಸಾಲಿ 2 ‘ಎ’ ಮೀಸಲಾತಿ | ಸುಪ್ರೀಂ ಕೋರ್ಟ್ ಆದೇಶ ಸದನದ ಮುಂದೆ ಮಂಡನೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಳಗಾವಿ: ಲಿಂಗಾಯತ ಪಂಚಮಸಾಲಿ 2 ‘ಎ’ ಮೀಸಲಾತಿ ವಿಚಾರವಾಗಿ ಹಿಂದಿನ ಸರಕಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡೆವಿಟ್ ಹಾಗೂ ನ್ಯಾಯಾಲಯದ ಆದೇಶವನ್ನು ಸದನ ಮುಂದೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಪಂಚಮಸಾಲಿ 2-ಎ ಮೀಸಲಾತಿ ಹೋರಾಟ ಮಾಡಲು ಹೇರಿರುವ ನಿರ್ಬಂಧಕ್ಕೆ ಆಕ್ಷೇಪಿಸಿ ಗದ್ದಲ ಸೃಷ್ಟಿಸಿದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯನ್ನು ಪ್ರವರ್ಗ 2 ‘ಎ’ಗೆ ಸೇರಿಸಲು ಬಹಳ ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ನಾನು ಸಿಎಂ ಆದ ಬಳಿಕ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪಂಚಮಸಾಲಿ ಮುಖಂಡರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದೇನೆ. ಪಂಚಮಸಾಲಿಗಳು ಮೀಸಲಾತಿ ಕೇಳಲು ನಾನು ಅಡ್ಡಿಯಾಗಿಲ್ಲ ಎಂದು ವಿವರಣೆ ನೀಡಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳನ್ನು ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಎ ಹಾಗೂ ಪ್ರವರ್ಗ-3ಬಿ ಎಂದು ವಿಂಗಡಸಲಾಗಿದೆ. ಲಿಂಗಾಯಿತ ಹಾಗೂ ಪಂಚಮಸಾಲಿ ಜಾತಿಗಳು 3 ‘ಬಿ’ ಅಡಿ ಮೀಸಲಾತಿ ಪಡೆಯುತ್ತಿವೆ. ಪಂಚಮಸಾಲಿ ಸಮುದಾಯವನ್ನು 2 ‘ಎ’ ಸೇರಿಸಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವುದು ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಆಯೋಗದ ಮುಂದೆ ಮೀಸಲಾತಿ ವಿಚಾರವನ್ನು ಮಂಡಿಸುವಂತೆ ಪಂಚಮಸಾಲಿ ಹೋರಾಟಗಾರರಿಗೆ ತಿಳಿಸಿದ್ದೇನೆ ಎಂದರು.
ಹಿಂದಿನ ಬಿಜೆಪಿ ಸರಕಾರ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಿಲ್ಲ ಬದಲಾಗಿ, ಅಲ್ಪಸಂಖ್ಯಾತ ಮುಸ್ಲಿಮರಿಗೆ ನೀಡಿದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, 3ಎ ಹಾಗೂ 3ಬಿಗೆ ತಲಾ ಶೇ.2ರಂತೆ ಮೀಸಲಾತಿ ಹಂಚಿಕೆ ಮಾಡಿತ್ತು. ಇದನ್ನು ಆಕ್ಷೇಪಿಸಿ ಮುಸ್ಲಿಮರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ಹಿಂದಿನ ರಾಜ್ಯ ಸರಕಾರ ಮುಸ್ಲಿಮರ ಮೀಸಲಾತಿ ರದ್ದು ಪಡಿಸುವುದಿಲ್ಲ. ಯತಾಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅಫಿಡೆವಿಡ್ ಸಲ್ಲಿಸಿದೆ.
ಇದರ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಇದರ ಪ್ರತಿಯನ್ನು ನಾಳೆ(ಡಿ.10)ಯೇ ಸದನ ಮುಂದೆ ಮಂಡಿಸುತ್ತೇನೆ ಎಂದು ಸಿದ್ಧರಾಮಯ್ಯ ಇದೇ ವೇಳೆ ಸ್ಪಷ್ಟಣೆ ನೀಡಿದರು.
ಡಿ.19ಕ್ಕೆ ಕಲಾಪ ಮುಕ್ತಾಯ :
‘ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.20ರಿಂದ 22ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಆ ಹಿನ್ನಲೆಯಲ್ಲಿ ವಿಧಾನಮಂಡಲ ಅಧಿವೇಶನವನ್ನು ಡಿ.20ರ ಬದಲಾಗಿ ಡಿ.19ರಂದು ಅಧಿವೇಶನ ಕಲಾಪವನ್ನು ಮುಕ್ತಾಯಗೊಳಿಸಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಪ್ರಕಟಿಸಿದರು.