2024ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕ ಅಂಗೀಕಾರ
ಡಿ.ಕೆ.ಶಿವಕುಮಾರ್
ಬೆಳಗಾವಿ : 2024ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಸೋಮವಾರ ಅಂಗೀಕರಿಸಲಾಯಿತು.
ವಿಧೇಯಕದ ಕುರಿತು ವಿವರಣೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಸದವರಿಗೆ ಒಟಿಎಸ್ ಮೂಲಕ ತೆರಿಗೆ ಬಾಕಿ ಪಾವತಿಸಲು ನವೆಂಬರ್ 30ವರೆಗೂ ಕಾಲಾವಕಾಶ ನೀಡಲಾಗಿತ್ತು. ಈ ಮೂಲಕ ಪಾಲಿಕೆಗೆ 700 ಕೋಟಿ ರೂ.ಹೆಚ್ಚುವರಿಯಾಗಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. 3 ಲಕ್ಷ ಆಸ್ತಿಗಳಿಂದ 1200 ಕೋಟಿ ರೂ.ಬಾಕಿ ವಸೂಲಿ ಮಾಡಲಾಗಿದೆ. ಇನ್ನೂ 2.26 ಲಕ್ಷ ಆಸ್ತಿಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.
2024ರ ನವೆಂಬರ್ 30ರವರೆಗೆ ಒಟ್ಟು 4284 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈ ಸಂಬಂಧ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಿದ್ದು, ಈಗ 2024ನೇ ಸಾಲಿನ ಬೃಹತ್ ಬೆಂಗಳೂರು ನಗರ ಪಾಲಿಕೆ ಎರಡನೇ ತಿದ್ದುಪಡಿ ವಿಧೇಯಕವನ್ನು ಅಂಗೀಕಾರ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಅಶ್ವತ್ಥ್ ನಾರಾಯಣ, ಉಪ ಮುಖ್ಯಮಂತ್ರಿ ಉತ್ತಮ ತಿದ್ದುಪಡಿ ವಿಧೇಯಕ ಮಂಡಿಸಿದ್ದು, ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಿದ್ದಾರೆ. ಇದುವರೆಗೂ ತೆರಿಗೆ ಪಾವತಿಸದವರು ಕೂಡ ತೆರಿಗೆ ಪಾವತಿಸುವಂತೆ ಮಾಡಲಾಗಿದೆ. ತೆರಿಗೆ ವಂಚನೆ ಮಾಡುವವರು, ಕಡಿಮೆ ಆಸ್ತಿ ಮೌಲ್ಯ ಘೋಷಣೆ ಮಾಡಿಕೊಳ್ಳುವವರನ್ನು ತೆರಿಗೆ ವ್ಯಾಪ್ತಿಗೆ ತಂದಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಿಸಬೇಡಿ. ಆಸ್ತಿ ತೆರಿಗೆದಾರರ ಮೇಲೆ ಹೆಚ್ಚಿನ ಭಾರ ಹೊರಿಸಬೇಡಿ. ಪಾಲಿಕೆಯನ್ನು ಆಸ್ತಿ ತೆರಿಗೆ ಹಣದಲ್ಲೇ ನಡೆಸಲು ಮುಂದಾಗಬೇಡಿ. ರಾಜ್ಯದ ಒಟ್ಟಾರೆ ತೆರಿಗೆ ಪಾಲಲ್ಲಿ ಶೇ.65ರಷ್ಟು ಬೆಂಗಳೂರಿನಲ್ಲಿ ಸಂಗ್ರಹವಾಗುತ್ತಿದೆ. ಈ ನಗರಕ್ಕೆ ಬೇರೆ ಇಲಾಖೆಗಳಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ರಾಜ್ಯ ಸರಕಾರದಿಂದ ಬರುವ ಅನುದಾನ ಹೆಚ್ಚಾಗಬೇಕು. ಎಲ್ಲರನ್ನು ತೆರಿಗೆ ವ್ಯಾಪ್ತಿಗೆ ತರುವ ನಿಮ್ಮ ಪ್ರಯತ್ನಕ್ಕೆ ಶುಭಾಶಯ ತಿಳಿಸುತ್ತೇನೆ ಎಂದು ಅವರು ಹೇಳಿದರು.
ನಂತರ ಸ್ಪೀಕರ್ ಯು.ಟಿ.ಖಾದರ್ ವಿಧೇಯಕವನ್ನು ಮತಕ್ಕೆ ಹಾಕಿದರು. ಧ್ವನಿ ಮತದ ಮೂಲಕ ಸರ್ವಾನುಮತದಿಂದ ವಿಧೇಯಕಕ್ಕೆ ಅನುಮೋದನೆ ದೊರೆಯಿತು.