ಹಾವೇರಿ-ಧಾರವಾಡಕ್ಕೆ ಶಾಶ್ವತ ನೀರಾವರಿ ಯೋಜನೆ
ವರದಾ-ಬೇಡ್ತಿ ನದಿ ಜೋಡಣೆಗೆ ಯಾಸಿರ್ ಅಹ್ಮದ್ ಖಾನ್ ಪಠಾಣ್ ಆಗ್ರಹ
ಬೆಳಗಾವಿ (ಸುವರ್ಣ ವಿಧಾನಸೌಧ) : ‘ಹಾವೇರಿ, ಧಾರವಾಡ, ಗದಗ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ವರದಾ-ಬೇಡ್ತಿ ನದಿ ಜೋಡಣೆ ಯೋಜನೆ ರೂಪಿಸಿ, ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರಬೇಕು’ ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಯಾಸಿರ್ ಅಹ್ಮದ್ ಖಾನ್ ಪಠಾಣ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ಮುಂದುವರೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಉತ್ತರ ಕರ್ನಾಟಕ ಹೆಬ್ಬಾಗಿಲು ಹಾವೇರಿ-ಧಾರವಾಡ. ಆದರೆ, ಎರಡೂ ಜಿಲ್ಲೆಗಳಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದ ಕಾರಣಕ್ಕೆ ಸತತ ಬರಗಾಲಕ್ಕೆ ತುತ್ತಾಗುತ್ತಿದ್ದೇವೆ. ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಣ್ಣೆಹಳ್ಳದಿಂದ ನಮಗೆ ಸಮಸ್ಯೆಯಾಗುತ್ತಿದೆ. ಆಕಸ್ಮಿಕ ಪ್ರವಾಹದಿಂದ ತೊಂದರೆಯಾಗುತ್ತಿದೆ’ ಎಂದು ಗಮನ ಸೆಳೆದರು.
ಶಿಗ್ಗಾಂವಿ, ಸವಣೂರು ಮತ್ತು ಬಂಕಾಪುರ ಮೂರು ಪುರಸಭೆಗಳ ವ್ಯಾಪ್ತಿಯಲ್ಲಿನ ಜನರಿಗೆ ಹದಿನೈದು ದಿನಗಳಿಗೆ ಒಮ್ಮೆ ಕುಡಿಯುವ ನೀರು ಒದಗಿಸುತ್ತಿದ್ದು, ಜನರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಶಾಶ್ವತ ನೀರಾವರಿ ಯೋಜನೆ ಕಲ್ಪಿಸಿ, ಕೆರೆ ತುಂಬಿಸುವ ಕೆಲಸ ಮಾಡಿದರೆ ಮೂರು ಪಟ್ಟಣದಲ್ಲಿರುವ 1ಲಕ್ಷಕ್ಕೂ ಅಧಿಕ ಮಂದಿಗೆ ಕನಿಷ್ಟ ಪಕ್ಷ ವಾರಕ್ಕೆ ಒಮ್ಮೆಯಾದರೂ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಕಷ್ಟದಲ್ಲಿರುವ ರಾಜ್ಯದ ಜನರಿಗೆ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಜಕ್ಕೂ ವರದಾನ. ನನ್ನ ಕ್ಷೇತ್ರವೊಂದಕ್ಕೆ ಗ್ಯಾರಂಟಿ ಯೋಜನೆಗಳಿಂದ 250 ಕೋಟಿ ರೂ.ಗಳಷ್ಟು ಹಣ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಜನರ ಮನೆ ಬಾಗಿಲಿಗೆ ತಲುಪುತ್ತಿದೆ. ಕೇಂದ್ರ ಸರಕಾರ ರೈತರ ಆದಾಯ ದ್ವಿಗುಣಗೊಳಿಸುವ ವಾಗ್ದಾನ ನೀಡಿತ್ತು. ಆದರೆ, ಈವರೆಗೆ ರೈತರಿಗೆ ಏನೂ ನೆರವು ನೀಡಲಿಲ್ಲ. ಬದಲಿಗೆ ಪೆಟ್ರೋಲ್, ಡಿಸೇಲ್ ಸಹಿತ ರಸಗೊಬ್ಬರ, ಕೀಟನಾಶಕಗಳ ಬೆಲೆ ಏರಿಕೆ ಮಾಡಿದೆ ಎಂದು ಅವರು ಟೀಕಿಸಿದರು.
ಮಹದಾಯಿ ಕಳಸಾ-ಬಂಡೂರು ನಾಲಾ ಯೋಜನೆ ಅನುಷ್ಟಾನಕ್ಕೆ ತರುವ ಭರವಸೆಯನ್ನು ಬಿಜೆಪಿ ನೀಡಿತ್ತು. ಕೇಂದ್ರದಲ್ಲಿ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯವೂ ಸೇರಿ ಮೂರು ಕಡೆಗಳಲ್ಲಿ ಬಿಜೆಪಿ ನೇತೃತ್ವದ ಸರಕಾರವಿದ್ದರೂ ಮಹತ್ವದ ಯೋಜನೆ ಜಾರಿಗೆ ತರುತ್ತಿಲ್ಲ ಎಂದು ದೂರಿದ ಯಾಸೀರ್ ಅಹ್ಮದ್ ಖಾನ್ ಪಠಾಣ್, ಶಿಕ್ಷಣ, ಆರೋಗ್ಯ, ಉದ್ಯೋಗ ಕಲ್ಪಿಸಲು ನಮ್ಮ ಸರಕಾರ ವಿಶೇಷವಾದ ಆಸ್ಥೆ ವಹಿಸಬೇಕು ಎಂದು ಮನವಿ ಮಾಡಿದರು.