ಆಧುನಿಕ ಕರ್ನಾಟಕದ ಶಿಲ್ಪಿ ಎಸ್.ಎಂ.ಕೃಷ್ಣ: ಡಿ.ಕೆ.ಶಿವಕುಮಾರ್ ಬಣ್ಣನೆ
ಡಿ.ಕೆ.ಶಿವಕುಮಾರ್
ಬೆಳಗಾವಿ (ಸುವರ್ಣ ವಿಧಾನಸೌಧ) : ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಕೇವಲ ಐಟಿ-ಬಿಟಿ ವಲಯಕ್ಕೆ ಉತ್ತೇಜನ ನೀಡಲಿಲ್ಲ. ಬದಲಿಗೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೂ ಆದ್ಯತೆ ನೀಡಿದ್ದರು. ಅವರು ಆಧುನಿಕ ಕರ್ನಾಟಕದ ಶಿಲ್ಪಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಬಣ್ಣಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ‘ಎಸ್.ಎಂ.ಕೃಷ್ಣ ಅವರು ನನ್ನನ್ನು ತಮ್ಮ ಮಗನನ್ನು ಪೋಷಿಸಿ ಬೆಂಬಲಿಸಿದರು. ನನಗೂ ಅವರಿಗೂ ಒಂದೆರಡು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಈಗಲೂ ಆ ನಿರ್ಧಾರಗಳು ಸರಿಯಲ್ಲ ಎಂದು ಹೇಳುತ್ತೇನೆ. ಉಳಿದಂತೆ ನಮಿಬ್ಬರ ನಡುವಿನ ಸಂಬಂಧ ಅವಿನಾಭಾವದಿಂದಲೇ ಇತ್ತು’ ಎಂದು ಸ್ಮರಿಸಿದರು.
‘ಎಸ್ಸೆಂ ಕೃಷ್ಣರ ಸಾವು ನನಗೆ ದುಃಖ ತಂದಿಲ್ಲ. ಬದಲಾಗಿ ಸಂತೋಷ ತಂದಿದೆ. 92 ವರ್ಷ ತುಂಬು ಜೀವನದಲ್ಲಿ ಮೂರು-ನಾಲ್ಕು ತಿಂಗಳಷ್ಟೇ, ಅವರು ಅನಾರೋಗ್ಯದಿಂದ ಇದ್ದರು. ಉಳಿದಂತೆ ಅವರ ಉಡುಪು, ಜೀವನಶೈಲಿ ಎಲ್ಲವೂ ವರ್ಣಮಯವಾಗಿತ್ತು. ನಾನು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದು ಬಂಗಾರಪ್ಪರ ಜೊತೆ. ನನ್ನ ಮತ್ತು ಕೃಷ್ಣ ಅವರ ಸಂಬಂಧ ಬೇರೆಯ ಸ್ವರೂಪದಲ್ಲಿತ್ತು. ಬಂಗಾರಪ್ಪ ಹೊಸ ಪಕ್ಷ ಕಟ್ಟಿದಾಗ ನನ್ನನ್ನು ಕರೆಯಲಿಲ್ಲ. ಕಾಂಗ್ರೆಸ್ನಲ್ಲೇ ಉಳಿದುಕೊಂಡಿದ್ದೆ. ಬಿಜೆಪಿಯವರು ಆಗ ನನ್ನನ್ನು ಆಹ್ವಾನಿಸಲಿಲ್ಲ’ ಎಂದು ಛೇಡಿಸಿದರು.
ಟಿಕೆಟ್ ಕೊಡಿಸಿದ್ದೆ :
ಎಸ್.ಎಂ.ಕೃಷ್ಣರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಾಗ ನಾನು ಮತ್ತು ಟಿ.ಬಿ.ಜಯಚಂದ್ರ ದಿಲ್ಲಿಗೆ ಹೋಗಿ ಪ್ರಧಾನಿ ಪಿ.ವಿ.ನರಸಿಂಹರಾವ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೆವು. ಅಲ್ಲಿ ಸದಸ್ಯರಾಗಿದ್ದ ಜಿ.ವೈ.ಕೃಷ್ಣನ್ ಬದಲಾಗಿ ಕೃಷ್ಣರಿಗೆ ರಾಜ್ಯಸಭಾ ಟಿಕೆಟ್ ನೀಡಬೇಕೆಂಬುದು ನಮ ಬೇಡಿಕೆಯಾಗಿತ್ತು. ಅದಕ್ಕೆ ಆರಂಭದಲ್ಲಿ ಪಿ.ವಿ.ನರಸಿಂಹರಾವ್ ಒಪ್ಪಲಿಲ್ಲ. ಅನಂತರ ಒಪ್ಪಿ ಟಿಕೆಟ್ ಕೊಟ್ಟಿದ್ದರು ಎಂದು ಅವರು ಸ್ಮರಿಸಿದರು.
ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ‘ಪಾಂಚಜನ್ಯ’ ಯಾತ್ರೆ ಮೊಳಗಿಸಿ ಅಧಿಕಾರಕ್ಕೆ ಬಂದರು. ನಾನು ಕೆಪಿಸಿಸಿ ಅಧ್ಯಕ್ಷನಾದ ವೇಳೆ ಅವರು ಮಾರ್ಗದರ್ಶನ ಮಾಡಿದ್ದರು. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಬಜೆಟ್ 26ಸಾವಿರ ಕೋಟಿ ರೂ. ಇತ್ತು. ಇಂದು 3.50ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಆಗ ಪಂಚಾಯಿತಿಗೆ ನೀಡಲಾಗುತ್ತಿದ್ದ ಅನುದಾನವನ್ನು 5ಲಕ್ಷ ರೂ. ಹೆಚ್ಚಿಸಿದರು. ರೈತರು ಶ್ರೀಗಂಧ ಬೆಳೆಯಲು ಅವಕಾಶ ಮಾಡಿಕೊಟ್ಟರು. ಅಬಕಾರಿ ಲಾಬಿಗೆ ಮಣಿಯದೆ ಪಾನೀಯ ನಿಗಮವನ್ನು ಸ್ಥಾಪಿಸಿದರು ಎಂದು ಅವರು ವಿವರಿಸಿದರು.
ಕೃಷ್ಣ ಅವರೆಂದು ಸ್ವಾರ್ಥಕ್ಕೆ, ಸ್ನೇಹ ಸಂಬಂಧಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡವರಲ್ಲ. ವರನಟ ಡಾ.ರಾಜ್ಕುಮಾರ್ ಅಪಹರಣವಾದಾಗ ಸಿಎಂ ಆಗಿದ್ದ ಕೃಷ್ಣ ಒತ್ತಡದಲ್ಲಿದ್ದರು. ಆಗ ಪೊಲೀಸರಿಗೆ ಮುಕ್ತ ಅವಕಾಶ ಮಾಡಿಕೊಡದೆ ಸಂಧಾನದ ಮೂಲಕ ಪ್ರಯತ್ನ ಮಾಡಲಾಯಿತು. ದಿಲ್ಲಿ ಮಾದರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ಯೋಜನೆ ಜಾರಿಗೆ, ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರೇ ಕಾರಣ. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಬದುಕಿಗೆ ನಂಬಿಕೆ ಮುಖ್ಯ. ನಂಬಿಕೆ ಇಲ್ಲ ಎಂದ ಮೇಲೆ ಸಂಬಂಧ ಉಳಿಯುವುದಿಲ್ಲ. ನನ್ನ ಮತ್ತು ಅವರ ನಡುವೆ ಉತ್ತಮವಾದ ಸಂಬಂಧವಿತ್ತು ಎಂದು ಶಿವಕುಮಾರ್ ನೆನಪು ಮಾಡಿಕೊಂಡರು.
‘ನಾನೊಮ್ಮೆ ಪ್ರತಿಪಕ್ಷ ನಾಯಕ ಸ್ಥಾನ ಬೇಡ’ ಎಂದು ಹೇಳಿಕೆ ನೀಡಿದ್ದೆ. ಅಂದು ನನಗೆ ಬುದ್ಧಿಮಾತು ಹೇಳಿದರು. ಮರಣ ದುಃಖವಲ್ಲ, ಸಾಧನೆಗೆ ಸಾವಿಲ್ಲ, ಹುಟ್ಟು-ಸಾವಿನ ನಡುವೆ ಏನು ಸಾಧನೆ ಮಾಡಿದ್ದೇವೆ? ಎಂಬುದು ಮುಖ್ಯ. ವಿಕಾಸಸೌಧ, ಉದ್ಯೋಗಸೌಧ ನಿರ್ಮಿಸುವ ಮೂಲಕ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಿದ್ದಾರೆ. ಅವರ ಆದರ್ಶ ನಮಗೆ ದಾರಿದೀಪ. ನನಗೆ ಕೋಟು ಹಾಕುವುದನ್ನು ಕಲಿಸಿದವರೇ ಎಸ್.ಎಂ.ಕೃಷ್ಣ. ಶಿಸ್ತುಬದ್ಧ ಜೀವನ, ಸಂಸ್ಕಾರ, ಸಂಸ್ಕೃತಿ ಎಲ್ಲವೂ ಅವರಲ್ಲಿತ್ತು ಎಂದು ಶಿವಕುಮಾರ್ ಗುಣಗಾನ ಮಾಡಿದರು.