ನಾನು ಸಂಗೊಳ್ಳಿ ರಾಯಣ್ಣ- ಕಿತ್ತೂರು ಚನ್ನಮ್ಮನ ಅಭಿಮಾನಿ : ಸಿಎಂ ಸಿದ್ದರಾಮಯ್ಯ
ಕಿತ್ತೂರು ಉತ್ಸವದ ಸಮಾರೋಪ ಸಮಾರಂಭ
ಕಿತ್ತೂರು : ದೇಶ ಅಂದರೆ, ದೇಶದೊಳಗಿರುವ ಜನ. ಯಾವುದೇ ಧರ್ಮದವರಿರಲಿ, ಜಾತಿಯವರಿರಲಿ ಅವರನ್ನು ಪ್ರೀತಿಬೇಕು ಎನ್ನುವುದನ್ನು ಚನ್ನಮ್ಮ-ರಾಯಣ್ಣ ಕಲಿಸಿಕೊಟ್ಟಿದ್ದಾರೆ. ಇದನ್ನು ನಾವು-ನೀವೆಲ್ಲಾ ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
200ನೇ ವರ್ಷದ ಚನ್ನಮ್ಮನ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಸರ್ಕಾರ ಆಚರಿಸಬೇಕು ಎಂದು ಮೊದಲ ಬಾರಿಗೆ ಆದೇಶಿಸಿದ್ದು ನಮ್ಮ ಸರ್ಕಾರ. ಇವತ್ತಿನ ಪೀಳಿಗೆಗೆ ಚನ್ನಮ್ಮನ ಇತಿಹಾಸ ಗೊತ್ತಾಗಬೇಕು ಎನ್ನುವ ಕಾರಣದಿಂದ ನಾವು ಈ ನಿರ್ಧಾರ ಮಾಡಿದೆವು. ಇತಿಹಾಸ ಗೊತ್ತಿಲ್ಲದವರು ಇತಿಹಾಸ ನಿರ್ಮಿಸಲಾಗದು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದರು.
ನಾನು ಸಂಗೊಳ್ಳಿ ರಾಯಣ್ಣ-ಕಿತ್ತೂರು ಚನ್ನಮ್ಮನ ಅಭಿಮಾನಿ. ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಮುಂತಾದವರ ಹೋರಾಟ ಮತ್ತು ಆಶಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಹೋರಾಟಗಾರರಿಂದ ದೇಶದ ಜನರನ್ನು ಪ್ರೀತಿಸುವುದನ್ನು ನಾವು ಕಲಿಯಬೇಕು. ದೇಶ ಅಂದರೆ ದೇಶದ ಜನ. ಯಾವುದೇ ಧರ್ಮದವರಿರಲಿ, ಯಾವುದೇ ಜಾತಿಯವರಿರಲಿ ಎಲ್ಲರೂ ನಮ್ಮ ದೇಶದ ಜನ. ದೇಶದ ಜನರನ್ನು ಪ್ರೀತಿಸುವುದೇ ನಿಜವಾದ, ಸರಿಯಾದ ದೇಶಪ್ರೇಮ ಎಂದರು.
ಬಸವಣ್ಣನವರೂ ಇದನ್ನೇ ಹೇಳಿದ್ದರು. ಜಾತಿ, ಧರ್ಮದ ತಾರತಮ್ಯ ಇಲ್ಲದಂತೆ ಮನುಷ್ಯ ಪ್ರೀತಿಯನ್ನು ಸಾರಿದವರು ಬಸವಣ್ಣ. ಹೀಗಾಗಿ ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ, ಮುಖ್ಯ ಸಚೇತಕರಾದ ಅಶೋಕ ಮ.ಪಟ್ಟಣ, ಶಾಸಕರಾದ ಮಹಂತೇಶ ಕೌಜಲಗಿ, ಪ್ರಕಾಶ ಹುಕ್ಕೇರಿ, ಭರಮಗೌಡ ಕಾಗೆ, ವಿಶ್ವಾಸ್ ವೈದ್ಯ, ಆಸಿಫ್ ಸೇಠ್, ಬುಡಾ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಜಿಂಗಳೆ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.