ರಾಜಕೀಯ ಭಾಷಣ ಬಿಡಿ, ಲಂಚ ಆಮಿಷದ ಬಗ್ಗೆ ಸ್ಪಷ್ಟೀಕರಣ ನೀಡಿ: ವಿಜಯೇಂದ್ರರಿಗೆ ಕೃಷ್ಣ ಬೈರೇಗೌಡ ಒತ್ತಾಯ
ಬೆಳಗಾವಿ ಸುವರ್ಣ ವಿಧಾನ ಸೌಧ: ವಿಧಾನ ಮಂಡಲ ಚಳಿಗಾಲದ ಅಧಿವೇಶನ
ಕೃಷ್ಣ ಬೈರೇಗೌಡ
ಬೆಳಗಾವಿ (ಸುವರ್ಣ ವಿಧಾನ ಸೌಧ), ಡಿ.16: ವಕ್ಫ್ ವಿಚಾರ ಮಾತನಾಡದಂತೆ ಬಿ.ವೈ. ವಿಜಯೇಂದ್ರ ತನ್ನ ಮೇಲೆ ಒತ್ತಡ ಹೇರಿದ್ದರು. ಅಲ್ಲದೆ, ರೂ.150 ಕೋಟಿ ಲಂಚದ ಆಮಿಷವೊಡ್ಡಿದ್ದರು ಎಂದು ಸ್ವತಃ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದಾರೆ. ವಿಜಯೇಂದ್ರ ಈ ಸಂಬಂಧ ಸ್ಪಷ್ಟೀಕರಣ ನೀಡಲಿ. ಅದನ್ನು ಬಿಟ್ಟು ರಾಜಕೀಯ ಭಾಷಣ ಮಾಡುತ್ತಾ ಸದನದ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಟೀಕಿಸಿದ್ದಾರೆ.
ಸೋಮವಾರದ ಕಲಾಪ ಆರಂಭವಾಗುತ್ತಿದ್ದಂತೆ, ವಕ್ಫ್ ಹಗರಣಕ್ಕೆ ಸಂಬಂಧಿಸಿ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟೀಕರಣ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮಯ ಕೋರಿದ್ದರು. ಆದರೆ, ತಮಗೆ ನೀಡಿದ ಸಮಯದಲ್ಲಿ ಅವರು ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡುವುದರ ಬದಲು ಆಡಳಿತ ಪಕ್ಷದ ವಿರುದ್ಧ ಟೀಕಾಪ್ರಹಾರ ಆರಂಭಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಕೃಷ್ಣ ಬೈರೇಗೌಡ, “ವಿಜಯೇಂದ್ರ ಅವರೇ…ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೀಸಲಿಟ್ಟಿದ್ದ ಸಮಯಾವಕಾಶವನ್ನು ತಮಗೆ ನೀಲಾಗಿದೆ. ಹೀಗಾಗಿ ವಕ್ಫ್ ವಿಚಾರದಲ್ಲಿ ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷ್ಟೀಕರಣವನ್ನಷ್ಟೇ ನೀಡಿ. ಅದನ್ನು ಬಿಟ್ಟು ರಾಜಕೀಯ ಭಾಷಣ ಮಾಡುತ್ತಾ ಸದನದ ಸಮಯ ಹಾಳು ಮಾಡಬೇಡಿ. ಒಂದು ವೇಳೆ ರಾಜಕೀಯ ಭಾಷಣ ಮಾಡಿಯೇ ಸಿದ್ದ ಎಂಬುದಾದರೆ ನಮಗೂ ಸದನದಲ್ಲಿ ರಾಜಕೀಯ ಭಾಷಣ ಮಾಡಲು ಅವಕಾಶ ನೀಡಿ” ಎಂದು ಸಭಾಧ್ಯಕ್ಷರಲ್ಲಿ ತಮ್ಮ ತಕರಾರನ್ನು ದಾಖಲಿಸಿದರು.
“ರಾಜಕೀಯ ಭಾಷಣ ಮಾಡುವುದಾದರೆ ನಾವೂ ಸಿದ್ದ. ಈ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಮಾತ್ರ ದಾಳಿ ಮಾಡುತ್ತವೆ, ವಿಚಾರಣೆ ನಡೆಸುತ್ತವೆ. ಆದರೆ, ಈ ಹಿಂದೆ ಬಿಜೆಪಿ ಸರಕಾರ ಇದ್ದಾಗಲೇ, ಸ್ವತಃ ಬಿಜೆಪಿ ನಾಯಕ ಅನ್ವರ್ ಮಾಡಿಪ್ಪಾಡಿ ಅವರು ವಿಜಯೇಂದ್ರ ರ ವಿರುದ್ಧ ರೂ.150 ಕೋಟಿ ಲಂಚದ ಆರೋಪ ಮಾಡಿದ್ದರು. ಆದರೆ, ಸಿಬಿಐ-ಇಡಿ ಈ ಬಗ್ಗೆ ಯಾಕೆ ತನಿಖೆ ಮಾಡಿಲ್ಲ. ಮೋದಿ ಗೆಳೆಯ ಅದಾನಿ ರೂ.2500 ಕೋಟಿ ಲಂಚ ನೀಡಿದ್ದರು ಅಂತ ಅಮೆರಿಕ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈ ಬಗ್ಗೆ ಸಿಬಿಐ-ಇಡಿ ತನಿಖೆ-ವಿಚಾರಣೆ ಏಕಿಲ್ಲ? ಬನ್ನಿ ಈ ಬಗ್ಗೆಯೂ ಚರ್ಚೆ ಮಾಡೋಣ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಸವಾಲೆಸೆದರು.
ಮುಂದುವರಿದು, “ಸದನ ಇರುವುದು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕೇ ವಿನಃ ರಾಜಕೀಯ ಭಾಷಣ ಮಾಡುತ್ತಾ ಕಲಾಪದ ಸಮಯವನ್ನು ಹಾಳು ಮಾಡುವುದಕ್ಕಲ್ಲ. ಶೀಘ್ರದಲ್ಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ, ಕಳಸ ಬಂಡೂರಿ, ಕೃಷ್ಣ ತುಂಗಭದ್ರಾ ಸೇರಿದಂತೆ ಇಲ್ಲಿನ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಬೇಕಿದೆ. ಹೀಗಾಗಿ ದಯವಿಟ್ಟು ಮೊದಲು ನಿಮ್ಮ ಸ್ಪಷ್ಟೀಕರಣ ನೀಡಿ” ಎಂದು ಒತ್ತಾಯಿಸಿದರು.