ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶವಿದೆ : ಸಂಸದ ಕಾರಜೋಳ
ಗೋವಿಂದ ಕಾರಜೋಳ
ಬೆಳಗಾವಿ : ಕರ್ನಾಟಕದಲ್ಲಿ ಈ ಬಾರಿ ದಲಿತ ಮುಖ್ಯಮಂತ್ರಿ ಮಾಡಲು ಅವಕಾಶವಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಯಾರನ್ನಾದರೂ ಮಾಡಲಿ, ದಲಿತ ಮುಖ್ಯಮಂತ್ರಿ ಮಾಡುತ್ತೇವೆಂದು ಘೋಷಣೆ ಮಾಡಲಿ ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಾಲ್ಕು ಗುಂಪಾಗಿ ಅಧಿಕಾರಕ್ಕಾಗಿ ರಣಹದ್ದುಗಳ ರೀತಿ ಕಚ್ಚಾಡುತ್ತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಡಾ.ಜಿ.ಪರಮೇಶ್ವರ್ ಅಥವಾ ಕೆ.ಎಚ್.ಮುನಿಯಪ್ಪ ಅವರನ್ನು ಮಾಡಬೇಕು, ಇಲ್ಲವಾದರೆ ಮಲ್ಲಿಕಾರ್ಜುನ ಖರ್ಗೆ ಅವರೇ ದಲಿತ ಸಿಎಂ ಆಗಲಿ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಂದು ಎರಡು ವರ್ಷ ಆಯಿತು. ಭಂಡತನದಿಂದ ಐದು ಗ್ಯಾರಂಟಿ ಕೊಡುತ್ತೇವೆ ಎಂದಿದ್ದರು. ಆದರೆ, ಈಗ ಗ್ಯಾರಂಟಿ ಹಣವನ್ನೂ ಕೊಡುತ್ತಿಲ್ಲ. ಗೃಹಲಕ್ಷ್ಮೀ ಹಣ ಮೂರು ತಿಂಗಳಿಂದ ಖಾತೆಗೆ ಜಮೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸುಳ್ಳುಗಳನ್ನು ಹೇಳಿಕೊಂಡು ಜನರಿಂದ ಮತ ಹಾಕಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು, ಜನರಿಗೆ ಮೋಸ ಮಾಡುತ್ತಿದ್ದಾರೆ. ಜನರಿಗೆ ಭರವಸೆ ಕೊಟ್ಟು ಗ್ಯಾರೆಂಟಿಗಳ ಹಣವನ್ನೇ ನೀಡುತ್ತಿಲ್ಲ. ಅಲ್ಲದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಗೋವಿಂದ ಕಾರಜೋಳ ಆರೋಪಿಸಿದರು.
ರಾಜ್ಯದಲ್ಲಿ ದಿನನಿತ್ಯ ಕೊಲೆ, ಸುಲಿಗೆಗಳು ನಡೆಯುತ್ತಿವೆ. ಬೇರೆ ರಾಜ್ಯದವರು ಬಂದು ಕಳ್ಳತನ ಮಾಡುತ್ತಿದ್ದಾರೆ. ಜನರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ. ಪುಂಡರ ಹಾವಳಿ ಹೆಚ್ಚಾಗಿದೆ. ಸರಕಾರದ ಹಿಡಿತ ತಪ್ಪಿ ಹೋಗಿದ್ದು, ಸಿದ್ದರಾಮಯ್ಯ ಎಲ್ಲದರಲ್ಲೂ ವಿಫಲರಾಗಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಅತಿ ಹೆಚ್ಚು ಸರಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೋವಿಂದ ಕಾರಜೋಳ ದೂರಿದರು.
ನಾಡಿನ ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯ ಸರಕಾರಕ್ಕೆ ಕಾಳಜಿಯಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ನಾಡಿನ ಜನ ಸಂಕಷ್ಟದಲ್ಲಿದ್ದು, ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೂಡಲೇ ಇವರು ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ. ಇವತ್ತೇ ಚುನಾವಣೆ ನಡೆದರೆ ಕಾಂಗ್ರೆಸ್ಗೆ ಕೇವಲ 20 ಸೀಟು ಮಾತ್ರ ಬರುತ್ತದೆ ಎಂದು ಗೋವಿಂದ ಕಾರಜೋಳ ಹರಿಹಾಯ್ದರು.