"ವಿಜಯೇಂದ್ರ ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ": ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಏಕವಚನದಲ್ಲೇ ಹರಿಹಾಯ್ದ ರಮೇಶ್ ಜಾರಕಿಹೊಳಿ
ಯತ್ನಾಳ್ ನಮ್ಮ ನಾಯಕ ಎಂದ ಮಾಜಿ ಸಚಿವ

ರಮೇಶ್ ಜಾರಕಿಹೊಳಿ
ಬೆಳಗಾವಿ : ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಏಕವಚನದಲ್ಲಿ ಸಂಬೋಧಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
"ವಿಜಯೇಂದ್ರ ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ಯೋಗ್ಯವಿಲ್ಲ. ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಇಂದಿಗೂ ಅವರ ಮೇಲೆ ಗೌರವ ಇದೆ. ಆದ್ರೆ ವಿಜಯೇಂದ್ರ ಸುಳ್ಳು ಹೇಳುವುದು ಬಿಡಬೇಕು" ಎಂದು ಹೇಳಿದ್ದಾರೆ.
ನಾನು ಶಿಕಾರಿಪುರಕ್ಕೆ ಬಂದು, ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡುತ್ತೇನೆ ಎಂದು ಸವಾಲು ಹಾಕಿರುವ ರಮೇಶ್ ಜಾರಕಿಹೊಳಿ, ವಿಜಯೇಂದ್ರ ಅವರನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಶಕ್ತಿ ನನಗಿದೆ ಎಂದು ಹೇಳಿದ್ದಾರೆ.
ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ. ವಿಜಯೇಂದ್ರರನ್ನು ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನು ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೇ ಸೈಕಲ್ ಮೇಲೆ ಓಡಾಡಿದೀನಿ ಅಂತಾ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದಿರಿ. ವಾಜಪೇಯಿ, ಮೋದಿಯವರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ. ನೀವು ಎನೇನು ತಗೊಂಡೀರಿ ಎಂದು ಬಿಎಸ್ ವೈ ಗೂ ಕುಟುಕಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ರನ್ನು ತಮ್ಮ ನಾಯಕ ಎಂದು ಹೇಳಿದ ಜಾರಕಿಹೊಳಿ, ಯತ್ನಾಳ್ ಅವರನ್ನ ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡಬೇಕು ಎಂದು ಅವರು ಹೇಳಿದ್ದಾರೆ.