ವಿಜಯೇಂದ್ರ ಹುಡುಗ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಯಕ್ಕಿಲ್ಲ : ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
ಬೆಳಗಾವಿ : "ಯಾವುದೋ ಸಂದರ್ಭದಲ್ಲಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅಲ್ಲದೆ, ಅವರು ಹತಾಶೆ ಭಾವನೆಯಿಂದ ರಾಜ್ಯಾದ್ಯಕ್ಷ ಸ್ಥಾನ ನಡೆಸುತ್ತಿದ್ದಾರೆ. ವರಿಷ್ಠರು ಯಾರಿಗೂ ಸೂಚನೆ ನೀಡಿಲ್ಲ. ಹುಡುಗ ವಿಜಯೇಂದ್ರ ರಾಜ್ಯಾದ್ಯಕ್ಷ ಸ್ಥಾನಕ್ಕೆ ಲಾಯಕ್ಕಿಲ್ಲ ಎನ್ನುವುದನ್ನು ಪದೇ ಪದೇ ಹೇಳುವ ಪ್ರಯತ್ನ ಮಾಡುತ್ತೇವೆ" ಎಂದು ಬಿಜೆಪಿ ಅತೃಪ್ತ ಬಣದ ನಾಯಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ನೇತೃತದಲ್ಲಿ ವಕ್ಫ್ ವಿರುದ್ಧ ರೈತರ ಪರವಾಗಿ ಮೊದಲ ಹಂತದ ಹೋರಾಟ ನಡೆಸಿದ ತಂಡವು ದಿಲ್ಲಿಗೆ ತೆರಳಿ ವರದಿಯನ್ನು ಜಗದಂಬಿಕಾ ಪಾಲ್ ನಾಯಕತ್ವದ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಿ ಬೆಳಗಾವಿಗೆ ವಾಪಸ್ಸಾಗಿದೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಮೇಶ್ ಜಾರಕಿಹೊಳಿ ಅವರು, ʼಮೊದಲನೆಯದಾಗಿ ವಿಜಯೇಂದ್ರ ಅವರಿಗೆ ಮನವಿ ಮಾಡುತ್ತೇನೆ. ವೈಯಕ್ತಿಕ ಭಿನ್ನಾಭಿಪ್ರಾಯ ಏನೇ ಇರಬಹುದು, ಆದರೇ ರಾಜ್ಯಾದ್ಯಕ್ಷರಾದ ಬಳಿಕ ಗಂಭೀರವಾಗಿ ಕೆಲಸ ಮಾಡಬೇಕು. ಹುಡುಗಾಟದ ಬುದ್ದಿ ಇದೆ, ರಾಜ್ಯಾದ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಸೂಕ್ತ ಅಲ್ಲʼ ಎಂದರು.
ʼಯಡಿಯೂರಪ್ಪ ಬಹಳಷ್ಟು ಹೋರಾಟ ಮಾಡಿದ ಬಳಿಕ ಆ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಯಡಿಯೂರಪ್ಪ ಮಗ ಎನ್ನುವ ಕಾರಣಕ್ಕೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಇದರಿಂದ ಯಡಿಯೂರಪ್ಪನವರ ಹೋರಾಟ, ತ್ಯಾಗ ಮಂಕಾಗುತ್ತದೆʼ ಎಂದು ಹೇಳಿದ್ದಾರೆ.