ವಕ್ಫ್ ಆಸ್ತಿ | ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆಗೆ ಸಿದ್ಧ : ಸಿಎಂ ಸಿದ್ದರಾಮಯ್ಯ
"1974ರ ಗೆಜೆಟ್ ನೋಟಿಫಿಕೇಷನ್ ಹಿಂಪಡೆಯುವುದಿಲ್ಲ"
ಸಿದ್ದರಾಮಯ್ಯ
ಬೆಳಗಾವಿ : ದೇವಸ್ಥಾನ, ಸ್ಮಶಾನ ಭೂಮಿ, ಸರಕಾರಿ ಶಾಲೆಗಳು ವಕ್ಫ್ ಆಸ್ತಿಗಳಲ್ಲಿ ಇದ್ದರೆ ಆ ಕುರಿತು ಪರಿಶೀಲಿಸಲು ಹೈಕೋರ್ಟಿನ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಇಂದಿಲ್ಲಿ ಪ್ರಕಟಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ಸರಕಾರದ ಪರವಾಗಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಕೃಷ್ಣ ಭೈರೇಗೌಡ ಸುದೀರ್ಘ ಉತ್ತರ ನೀಡಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದ ಜನತೆ ಪ್ರತಿಪಕ್ಷ ಬಿಜೆಪಿಯ ಒಡಕು ಮೂಡಿಸುವ ಮಾತುಗಳಿಗೆ ಯಾವುದೇ ಕಾರಣಕ್ಕೂ ಕಿವಿಗೂಡಬಾರದು. ಈ ಹಿಂದೆ ಬಿಜೆಪಿ ಪ್ರಣಾಳಿಕೆಯಲ್ಲೇ ವಕ್ಫ್ ಆಸ್ತಿಗಳನ್ನು ತೆರವು ಮಾಡುವ ವಾಗ್ದಾನ ನೀಡಿದ್ದು, ಇದೀಗ ರಾಜಕೀಯ ಕಾರಣಕ್ಕಾಗಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ, ನಮ್ಮ ಸರಕಾರಕ್ಕೆ ಈ ವಿಚಾರ ಪ್ರತಿಷ್ಠೆಯ ವಿಷಯವಲ್ಲ ಎಂದು ವಿವರಣೆ ನೀಡಿದರು.
ಆರಂಭಕ್ಕೆ ಸಚಿವ ಝಮೀರ್ ಅಹ್ಮದ್ ಖಾನ್ ಉತ್ತರ ನೀಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ‘1974ರಲ್ಲಿ ಹೊರಡಿಸಿರುವ ಗೆಜೆಟ್ ಅಧಿಸೂಚನೆ (ನೋಟಿಫಿಕೇಷನ್)ಯನ್ನು ಹಿಂಪಡೆಯುವುದಿಲ್ಲ. ಬಿಜೆಪಿಯವರು 1974ರ ಗೆಜೆಟ್ ನೋಟಿಫಿಕೇಷನ್ ರದ್ದು ಮಾಡುವಂತೆ ಕೇಳುತ್ತಿದ್ದಾರೆ. ಈ ಹಿಂದೆ ಅವರದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಯಾಕೆ ಅದನ್ನು ರದ್ದು ಮಾಡಿಲ್ಲ. ಈಗ ಅವರಿಗೆ ಜ್ಞಾನೋದಯವಾಯಿತೇ? ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉಪ ಚುನಾವಣೆಗೆ ಹೋದರು ಏನಾಯಿತು? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ನಾಚಿಕೆ, ಮಾನ, ಮರ್ಯಾದೆ ಇಲ್ಲ. ಜನರನ್ನು ಸರಕಾರದ ವಿರುದ್ಧ ಎತ್ತಿಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆ ವಕ್ಫ್ ಆಸ್ತಿಗಳ ಒತ್ತುವರಿ ತೆರವು ಮಾಡಿ, ರಕ್ಷಣೆ ಮಾಡುವ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸಭಾತ್ಯಾಗ: ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರ ನೀಡಲು ಮುಂದಾದಾಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸಂಬಂಧಪಟ್ಟ ಇಲಾಖೆಯ ಸಚಿವರು ಸದನದಲ್ಲಿ ಇರುವಾಗ ಹೆಚ್ಚುವರಿ ಮಾಹಿತಿ ನೀಡುವುದಾದರೆ ಮುಖ್ಯಮಂತ್ರಿ ನೀಡಲಿ. ಬೇರೆ ಸಚಿವರು ಉತ್ತರಿಸುವುದು ಬೇಡ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸರಕಾರ ಎಂದರೆ ಸಂಪುಟ ಪರಿಷತ್ತು. ಸರಕಾರದ ಪರವಾಗಿ ಯಾವ ಸಚಿವರು ಬೇಕಾದರೂ ಉತ್ತರ ನೀಡಬಹುದು ಎಂದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆದು, ಸರಕಾರದ ಉತ್ತರವನ್ನು ಬಹಿಷ್ಕರಿಸಿ ಬಿಜೆಪಿ ಸಭಾತ್ಯಾಗ ಮಾಡಿತು.
ಬಿಜೆಪಿಗೆ ಕೈಕೊಟ್ಟ ಜೆಡಿಎಸ್: ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಭಾತ್ಯಾಗ ಮಾಡಿದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಸದಸ್ಯರಾದ ಎ.ಮಂಜು, ಶಾರದಾ ಪೂರ್ಯಾನಾಯ್ಕ್, ಜಿ.ಟಿ.ದೇವೇಗೌಡ ಸದನದಲ್ಲೇ ಉಳಿಯುವ ಮೂಲಕ ಬಿಜೆಪಿಗೆ ಮುಖಭಂಗವನ್ನುಂಟು ಮಾಡಿದರು. ಸರಕಾರ ನೀಡಿದ ಸುದೀರ್ಘ ಉತ್ತರಕ್ಕೆ ಸುರೇಶ್ ಬಾಬು ಅಭಿನಂದಿಸಿದರು. ಆ ಮೂಲಕ ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲವೆಂಬ ಸಂದೇಶವನ್ನು ನೀಡಿದರು. ಇದೇ ವೇಳೆ ಬಿಜೆಪಿ ಸದಸ್ಯರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಕೂಡ ಸದನದಲ್ಲೇ ಉಳಿಯುವ ಮೂಲಕ ಗಮನ ಸೆಳೆದರು.
‘ವಕ್ಫ್ ಆಸ್ತಿಯನ್ನು ಶೇ.95ರಷ್ಟು ಒತ್ತುವರಿ ಮಾಡಿರುವುದು ಮುಸ್ಲಿಮರೇ ಆಗಿದ್ದಾರೆ. ರೈತರಿಂದ ವಕ್ಫ್ ಆಸ್ತಿ ಹೆಸರಿನಲ್ಲಿ ಉಳುಮೆ ಮಾಡುತ್ತಿರುವ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸುಳ್ಳನ್ನು ಹಬ್ಬಿಸುವ ಮೂಲಕ ಒಗ್ಗಟ್ಟಿನಿಂದ ಇರುವ ಗ್ರಾಮೀಣ ಪ್ರದೇಶದ ಜನರಲ್ಲಿ ಭೀತಿ ಹುಟ್ಟಿಸಲಾಗುತ್ತಿದೆ. ಎಲ್ಲ ಸರಕಾರಗಳ ಅವಧಿಯಲ್ಲಿ ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ವಕ್ಫ್ ಆಸ್ತಿ ಅತಿಕ್ರಮಣದ ವಿರುದ್ಧ ಕಾರ್ಯಪಡೆ ರಚನೆ ಮಾಡಲು ಬಿಜೆಪಿ ಸರಕಾರದ ಅವಧಿಯಲ್ಲಿ ಆದೇಶವಾಗಿತ್ತು. ಹೀಗಿದ್ದರೂ ರೈತರ, ದೇವಸ್ಥಾನ ಆಸ್ತಿ ವಾಪಸ್ ಪಡೆಯಲಾಗುತ್ತಿದೆ ಎಂದು ಬಿಜೆಪಿಗರು ವಿವಾದ ಮಾಡಿದ್ದಾರೆ. 20ಸಾವಿರ ಎಕರೆ ವಕ್ಫ್ ಆಸ್ತಿ ಉಳಿದಿದೆ. ಈ ಪೈಕಿ 17ಸಾವಿರ ಎಕರೆ ಒತ್ತುವರಿಯಾಗಿದೆ’
-ಕೃಷ್ಣಭೈರೇಗೌಡ, ಕಂದಾಯ ಸಚಿವ