‘ಪಂಚಮಸಾಲಿ ಮೀಸಲಾತಿ’ ಈಡೇರಿಸಲು ನಾವು ಬದ್ಧ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸುವ ಕುರಿತು ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದೇವೆ. ಹಾಗಾಗಿ ಅದನ್ನು ಈಡೇರಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಹೋರಾಟದ ಹಾದಿ ತಪ್ಪದಂತೆ ನೋಡಿಕೊಳ್ಳಬೇಕು. ಯಾರೂ ಹೋರಾಟದಿಂದ ಹಿಂದೆ ಸರಿಯುವುದು ಬೇಡ, ಸಮಾಜಕ್ಕೆ ನಾನು ನ್ಯಾಯ ಕೊಡಿಸುತ್ತೇನೆ ಎಂದರು.
ನಮ್ಮ ಮುಂದಿನ ಪೀಳಿಗೆಯ ಉಜ್ವಲ ಜೀವನಕ್ಕೆ ಮೀಸಲಾತಿ ಅಗತ್ಯ. ಅದಕ್ಕಾಗಿ ಹೋರಾಟ ಅನಿವಾರ್ಯ. ಬೇರೆಯವರಿಗೆ ಮೀಸಲಾತಿ ಕೊಟ್ಟಾಗ ನಾವು ಹೊಟ್ಟೆಕಿಚ್ಚು ಪಟ್ಟಿಲ್ಲ, ಯಾರ ತುತ್ತನ್ನೂ ನಾವು ಕಸಿಯುವುದಿಲ್ಲ. ನಾನು ಸರಕಾರದ ಹೊರಗಿದ್ದರೂ ಹೋರಾಟ ಮಾಡುತ್ತೇನೆ, ಒಳಗಿದ್ದರೂ ಹೋರಾಟ ಮಾಡುತ್ತೇನೆ. ನಾವು ಪಂಚಮಸಾಲಿ ಸಮಾಜದ ಶಾಸಕರಷ್ಟೇ ಸಭೆ ನಡೆಸುವುದು ಬೇಡ. ನಮ್ಮ ಬೆಂಬಲದಿಂದ ಇನ್ನೂ ಹಲವಾರು ಶಾಸಕರು ಆಯ್ಕೆಯಾಗಿದ್ದಾರೆ. ಹೋರಾಟಕ್ಕೆ ಅವರೆಲ್ಲರ ಬೆಂಬಲ ಪಡೆಯೋಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಬಸವಣ್ಣ, ಅಂಬೇಡ್ಕರ್, ಕನಕದಾಸ, ಏಸುಕ್ರಿಸ್ತ, ಪೈಗಂಬರ್ ಸೇರಿದಂತೆ ಎಲ್ಲರೂ ಸಮಾನತೆಯ ಸಂದೇಶ ಸಾರಿದ್ದಾರೆ. ನಮಗೂ ಸಮಾನತೆ ಬೇಕು. ಹಾಗಾಗಿ ಹೋರಾಟ ನಿರಂತರವಾಗಿರಲಿ. ಹೋರಾಟ ಮಾಡಿ ಹಕ್ಕು ಪಡೆಯೋಣ. ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೆ ಸಿಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಸವಜಯ ಮೃತ್ಯುಂಜಯ ಸ್ವಾಮಿ ಮಾತನಾಡಿ, ಹಿಂದೆ ಹೋರಾಟದಲ್ಲಿ ಭಾಗಿಯಾಗಿದ್ದ ಅನೇಕರು ಈಗ ಬರುತ್ತಿಲ್ಲ ಎಂದು ಜನರು ನನ್ನ ಬಳಿ ಆಕ್ಷೇಪಿಸಿದ್ದಾರೆ. ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರದಲ್ಲಿದ್ದರೂ ನಮ್ಮ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಿಂದಿನಿಂದಲೂ ಅವರು ನಮ್ಮ ಸಮಾಜದ ಜತೆಗಿದ್ದಾರೆ. ಅವರು ನಮಗೆ ನ್ಯಾಯ ಕೊಡಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ನಮ್ಮ ಹೋರಾಟವನ್ನು ಮುಂದುವರಿಸೋಣ. ಡಿ.5ರಂದು ಪಂಚಮಸಾಲಿ ಶಾಸಕರ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ನಿರ್ಧರಿಸೋಣ. ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಬರಲಿ ಎಂದು ಅವರು ಹೇಳಿದರು. ಬಿಜೆಪಿ ಸರಕಾರ ನಮಗೆ ಮಾತು ಕೊಟ್ಟು ಮೋಸ ಮಾಡಿದ್ದರಿಂದ ನಮ್ಮ ಸಮಾಜದ ಅರ್ಧಕ್ಕಿಂತ ಹೆಚ್ಚು ಜನರು ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ. ಯಾವುದೇ ಸರಕಾರ ಬಂದರೂ ಬೇಡಿಕೆ ಈಡೇರುವವರೆಗೂ ಹೋರಾಟ ಮಾಡಲಾಗುವುದು. ಲೋಕಸಭಾ ಚುನಾವಣೆ ಮುಗಿದರೆ ನಮ್ಮನ್ನು ಕೇಳುವುದಿಲ್ಲ. ಹಾಗಾಗಿ ಅಷ್ಟರೊಳಗೆ ಮೀಸಲಾತಿ ಕಲ್ಪಿಸುವಂತೆ ಗಡುವು ನೀಡಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕಾರಿಣಿಯಲ್ಲಿ ಪಂಚಮಸಾಲಿ ಸಮಾಜದ ಪ್ರಮುಖರಾದ ಎ.ಬಿ.ಪಾಟೀಲ್, ಶಶಿಕಾಂತ ನಾಯಿಕ, ಎಚ್.ಎಸ್.ಶಿವಶಂಕರ್, ಅಡಿವೇಶ ಇಟಗಿ. ಆರ್.ಕೆ.ಪಾಟೀಲ್, ರುದ್ರಗೌಡ ಪಾಟೀಲ್ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.