ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಬಿಜೆಪಿ ನಾಯಕರ ಮೌನವೇಕೆ? : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ : ಇಡೀ ದೇಶವೇ ತಲೆ ತಗ್ಗಿಸುವಂಥ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ನಾಯಕರು ಮೌನ ವಹಿಸಿರುವುದು ಏಕೆ?. ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಭಾರೀ ಆಸಕ್ತಿ ತೋರಿಸಿದ್ದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಬೆಳಗಾವಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರೇ ಈಗಲೂ ಸಂತ್ರಸ್ತ ಮಹಿಳೆಯರ ಪರ ಧ್ವನಿ ಎತ್ತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹಿಸಿದರು.
ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಹಿಳೆಯರಿಗೆ ಎಲ್ಲೇ ಅನ್ಯಾಯವಾದರೂ ನಾವು ಖಂಡಿಸುತ್ತೇವೆ. ಅವರ ಪರವಾಗಿ ನಿಲ್ಲುತ್ತೇವೆ. ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಅದರಲ್ಲಿ ರಾಜಕೀಯ ಬೆರೆಸಲು ನಾವು ಹೋಗುವುದಿಲ್ಲ. ಆದರೆ ಹುಬ್ಬಳ್ಳಿ ಪ್ರಕರಣದಲ್ಲಿ ಅತೀವ ಆಸಕ್ತಿ ತೋರಿಸಿದ್ದ ಬಿಜೆಪಿ ನಾಯಕರು ಈಗೇಕೆ ಮೌನವಾಗಿದ್ದಾರೆ. ಇಲ್ಲೂ ನೂರಾರು ಮಹಿಳೆಯರಿಗೆ ಅನ್ಯಾಯವಾಗಿದೆಯಲ್ಲವೇ? ಈಗಲೂ ಸಂಸದೆ ಮಂಗಲಾ ಅಂಗಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಿ. ಜಗದೀಶ ಶೆಟ್ಟರ್ ಅಷ್ಟೇ ಆಸಕ್ತಿಯಿಂದ ಹೇಳಿಕೆಗಳನ್ನು ನೀಡಲಿ" ಎಂದು ಒತ್ತಾಯಿಸಿದರು.
ಕಾನೂನಿನ ಚೌಕಟ್ಟಿನಲ್ಲಿ ಕ್ರಮ
ವಿದೇಶದಿಂದ, ಹೊರ ರಾಜ್ಯಗಳಿಂದ ಫೋನ್ ಕಾಲ್ ಗಳು ಬರುತ್ತಿವೆ. ಇಂತಹ ಪ್ರಕರಣ ನಡೆದಿದ್ದು ನಿಜವೇ ಎಂದು ಪ್ರಶ್ನಿಸುತ್ತಿದ್ದಾರೆ. ಸರಕಾರ ಏನು ಕ್ರಮ ಕೈಗೊಳ್ಳಲಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಪ್ರಕರಣವನ್ನು ರಾಜ್ಯ ಸರ್ಕಾರ ಈಗಾಲೇ ಎಸ್ ಐಟಿ ತನಿಖೆಗೆ ವಹಿಸಿದ್ದು, ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಜೆಪಿಯ ಮಹಿಳಾ ಮಣಿಗಳು ಎಲ್ಲಿದ್ದಾರೆ. ಸಂಸದೆ ಮಂಗಲಾ ಅಂಗಡಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗಬೇಕು. ನೇಹಾ ಹಿರೇಮಠ್ ವಿಷಯದಲ್ಲಿ ಮಾತಾಡಿದಂತೆ ಜಗದೀಶ್ ಶೆಟ್ಟರ್ ಅವರು ಮಾತಾಡಬೇಕು. 16 ವರ್ಷದಿಂದ 50, 60 ವರ್ಷದ ಮಹಿಳೆಯರು ಪ್ರಜ್ವಲ್ ರೇವಣ್ಣ ಅವರಿಂದ ನೊಂದಿದ್ದಾರೆ. ಮಹಿಳೆಯರ ಪರ ಮೈತ್ರಿ ನಾಯಕರು ನಿಲ್ಲಲಿ ಎಂದು ಹೇಳಿದರು.
ಬಿಜೆಪಿ ನಾಯಕರಿಗೆ ಮೊದಲೇ ಅರಿವಿತ್ತು
ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ, ಹಿರಿಯ ಮುಖಂಡ ಎ.ಟಿ.ರಾಮಸ್ವಾಮಿ, ದೇವರಾಜೇ ಗೌಡ ಎಂಬುವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಮೈಸೂರು ಪ್ರವಾಸದಲ್ಲಿದ್ದ ಅಮಿತ್ ಶಾ ಅವರ ಗಮನಕ್ಕೆ ಆಗಲೇ ತಂದಿದ್ದರು. ಇಂಥ ವಿಷಯ ಗೊತ್ತಿದ್ದರೂ ಮೈತ್ರಿ ನಾಯಕರು ಪ್ರಜ್ವಲ್ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದು ಎಷ್ಟು ಸರಿ. ಇದಕ್ಕೆ ಬಿಜೆಪಿ ನಾಯಕರು ಉತ್ತರಿಸುವರೇ?. ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಬಿಜೆಪಿ ನಾಯಕರಿಗೆ ಮೊದಲೇ ಅರಿವಿತ್ತು ಎಂದೂ ಅವರು ಅರೋಪಿಸಿದರು.
ನೇಹಾ ಹಿರೇಮಠ್ ಕೊಲೆ ಪ್ರಕರಣದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರು, ಈಗ ಯಾಕೆ ಜಾಣ ಮೌನವಾಗಿದ್ದಾರೆ. ಮೊನ್ನೆ ಮಾಜಿ ಶಾಸಕರೊಬ್ಬರೂ ನನ್ನ ಬಗ್ಗೆ ತುಚ್ಛವಾಗಿ ಮಾತಾಡುವಾಗ ವೇದಿಕೆಯಲ್ಲಿದ್ದ ಸಂಸದೆ ಮಂಗಲಾ ಅಂಗಡಿ, ಜಗದೀಶ್ ಶೆಟ್ಟರ್ ನಕ್ಕರು ಹೊರತು ಏನು ಮಾತಾಡ್ಲಿಲ್ಲ. ಸಂಜಯ್ ಪಾಟೀಲ್ ಗೆ ಕನಿಷ್ಠ ಬುದ್ದಿವಾದ ಹೇಳಲಿಲ್ಲ ಎಂದು ಸಚಿವರು ಹೇಳಿದರು.
ಉಡುಪಿ ಹಾಸ್ಟೆಲ್ ನಲ್ಲಿ ಕ್ಯಾಮೆರಾ ಇಟ್ಟ ವಿಷಯವನ್ನು ಬಿಜೆಪಿಯವರು ರಾಜಕರಣಗೊಳಿಸಿದರು, ರಾಷ್ಟ್ರೀಯ ಮಹಿಳಾ ಆಯೋಗದವರು ಓಡೋಡಿ ಬಂದರು. ಈಗ ಸಾವಿರಾರು ಮಹಿಳೆಯರ ಮಾನ ಹರಾಜಾದರೂ ಯಾರು ಏನೂ ಮಾತಾಡುತ್ತಿಲ್ಲ. ಅಶೋಕ್, ವಿಜಯೇಂದ್ರ ಅವರೇ ಈಗ ಏನು ಹೇಳುತ್ತೀರಾ?, ಶೋಭಾ ಕರಂದ್ಲಾಜೆ, ಸ್ಮತಿ ಇರಾನಿ ಅವರು ಯಾಕೆ ಏನು ಹೇಳುತ್ತಿಲ್ಲ. ಮಂಡ್ಯ ಸೊಸೆ ಸುಮಲತಾ ಏನ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸರಕಾರ ನೊಂದ ಮಹಿಳೆಯರ ಪರವಾಗಿ ನಿಲ್ಲಲಿದೆ. ಅವರ ರಕ್ಷಣೆ ಮಾಡಲಿದೆ. ಪ್ರಕರಣದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಜ್ವಲ್ ಪ್ರಕರಣದ ವಿಡಿಯೋಗಳನ್ನು ಯಾರೂ ಶೇರ್ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ್ ನಾವಲಗಟ್ಟಿ ಉಪಸ್ಥಿತರಿದ್ದರು.