ಚಳಿಗಾಲದ ಅಧಿವೇಶನ | ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ
ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ಆರಂಭವಾದ ವಿಧಾನಮಂಡಲದ ಚಳಿಗಾಲ ಅಧಿವೇಶನದಲ್ಲಿ ಅಗಲಿದ ಗಣ್ಯರಿಗೆ ಮೇಲ್ಮನೆಯಾದ ವಿಧಾನಪರಿಷತ್‌ನಲ್ಲಿ ಸಂತಾಪ ಸೂಚಿಸಲಾಯಿತು.
ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕೆ.ಎಚ್.ಶ್ರೀನಿವಾಸ, ಶುಭಲತಾ ವಸಂತ ಅಸ್ನೋಟಿಕರ್, ಕಾಲೇಬುಡ್ಡೆ ಇಸ್ಮಾಯಿಲ್ ಸಾಬ್, ನರೇಂದ್ರ ಖೇಣಿ, ಕೆ.ನಿರಂಜನ ನಾಯ್ಡು, ಸಾವಿತ್ರಮ್ಮ ಎಂ.ಗುಂಡಿ, ಮಾಜಿ ಸಚಿವರು ಹಾಗೂ ವಿಧಾನಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ಮನೋಹರ್ ತಹಸೀಲ್ದಾರ, ಉದ್ಯಮಿ ರತನ್ ನಾವಲ್ ಟಾಟಾ, ಕಲಬುರಗಿ ಜಿಲ್ಲೆಯ ಖ್ವಾಜಾ ಬಂದೇ ನವಾಝ್ ವಿಶ್ವ ವಿದ್ಯಾಲಯದ ಕುಲಪತಿಗಳು ಹಾಗೂ ಶಿಕ್ಷಣ ತಜ್ಞ ಡಾ.ಸೈಯದ್ ಶಾಹ್ ಖುಸ್ರೊ ಹುಸೇನಿ, ಸಾಹಿತಿ ರಾಜಶೇಖರ ನೀರಮಾನ್ವಿ ಅವರಿಗೆ ಸಂತಾಪ ಸೂಚಿಸಲಾಯಿತು.
ಆರಂಭದಲ್ಲಿ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆಯ ನಿರ್ಣಯದ ಪ್ರತಿಯನ್ನು ಸಭೆಗೆ ಮಂಡಿಸಿದರು.
ಸಂತಾಪ ನಿರ್ಣಯ ಬೆಂಬಲಿಸಿ ಮಾತನಾಡಿದ ಸಭಾ ನಾಯಕರಾದ ಸಚಿವ ಎನ್.ಎಸ್.ಭೋಸರಾಜು ಮತ್ತು ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಅಗಲಿದ ಗಣ್ಯರು ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ವಿಧಾನಪರಿಷತ್‌ನ ಶಾಸಕರು ಅಗಲಿದ ಗಣ್ಯರ ಸೇವೆ ಮತ್ತು ಒಡನಾಟ ಸೇರಿ ಇನ್ನಿತರ ವಿಷಯಗಳನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಅಗಲಿದ ಗಣ್ಯರ ಗೌರವಾರ್ಥ ಶಾಸಕರು ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವುದರ ಮೂಲಕ ನಮನ ಸಲ್ಲಿಸಿದರು.