ಯಡಿಯೂರಪ್ಪ ಒಬ್ಬರೇ ಬಿಜೆಪಿ ಕಟ್ಟಿದ್ದಾರಾ? : ಯತ್ನಾಳ್ ಪ್ರಶ್ನೆ
ಬೆಳಗಾವಿ : "ನಾವು 35-40 ವರ್ಷಗಳಿಂದ ಯಡಿಯೂರಪ್ಪ ಜೊತೆಗೆ ಇರಲಿಲ್ಲವೇ? ಅವರು ಒಬ್ಬರೇ ಬಿಜೆಪಿ ಕಟ್ಟಿದ್ದಾರಾ" ಎಂದು ಬಿಜೆಪಿ ಶಾಸಕ ಯತ್ನಾಳ್ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಒಬ್ಬರೇ ಪಕ್ಷ ಕಟ್ಟಿಲ್ಲ. ನಾವೂ ಸಹ ಯಡಿಯೂರಪ್ಪ ಜೊತೆಗೇ ಕೆಲಸ ಮಾಡಿದ್ದೇವೆ. ನಾವೇ ಅವರ ಕಾರಿಗೆ ಪೆಟ್ರೋಲ್ ಹಾಕಿಸಿದ್ದೇವೆ. ಬಸ್ ಟಿಕೆಟ್ ಕೊಡಿಸಿ ಕಳುಹಿಸಿ ಕೊಟ್ಟಿದ್ದೇವೆ. ಈಗ ಅವರ ಶಿಷ್ಯಂದಿರು ನಮಗೆ ಸೈಕಲ್ ಹೊಡೆದಿದ್ದು ಎಂದು ಹೇಳುತ್ತಾರೆ. ಸ್ವತಃ ಯಡಿಯೂರಪ್ಪ ಮನೆಯಲ್ಲೇ ಭಿನ್ನಮತೀಯರ ಸಭೆ ಆಗುತ್ತದೆ. ಔತಣಕೂಟ ಮಾಡುವುದು, ಅಲ್ಲಿಂದ ಬೆನ್ನಿಗೆ ಚಾಕು ಹಾಕುವುದು ಅಲ್ಲ" ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ವಿಜಯೇಂದ್ರ ಆಯೋಜಿಸಿದ್ದ ಔತಣ ಕೂಟದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗವಹಿಸಿಲ್ಲ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ವಿಜಯೇಂದ್ರ ಔತಣಕೂಟಕ್ಕೆ ನಾನು ಹೊಗಿಲ್ಲ, ರಮೇಶ್ ಜಾರಕಿಹೊಳಿ ಕೂಡ ಹೋಗಲ್ಲ. ಅವರು ಇಲ್ಲಿ ಔತಣ ಕೂಟಕ್ಕೆ ಕರೆಯುತ್ತಾರೆ. ದಾವಣಗೆರೆಯಲ್ಲಿ ಚೇಲಾಗಳನ್ನು ಬಿಟ್ಟು ಸಭೆ ಮಾಡುತ್ತಾರೆ. ಅವರ ಗನ್ಮ್ಯಾನ್ಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ" ಎಂದು ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.