ಯತ್ನಾಳ್ ತನ್ನ ಕೀಳುಮಟ್ಟದ ಹೇಳಿಕೆಗಳಿಂದಾಗಿ ಕೋರ್ಟ್ ಮುಂದೆ ನಿಂತಿರುವುದು : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್,ಬಸನಗೌಡ ಪಾಟೀಲ್ ಯತ್ನಾಳ್
ಬೆಳಗಾವಿ(ಸುವರ್ಣ ವಿಧಾನಸೌಧ) : ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಕೀಳುಮಟ್ಟದ ಹೇಳಿಕೆಗಳಿಂದಾಗಿಯೇ ಇವತ್ತು ನ್ಯಾಯಾಲಯದ ಎದುರು ನಿಲ್ಲುವಂತಾಗಿರುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆಯುತ್ತಿದ್ದ ಚರ್ಚೆ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡುವ ವೇಳೆ ಮಧ್ಯಪ್ರವೇಶ ಮಾಡಿದ ಬಸನಗೌಡ ಪಾಟೀಲ್ ಯತ್ನಾಳ್, ವಕ್ಫ್ ವಿಚಾರದಲ್ಲಿ ದಿನೇಶ್ ಗುಂಡೂರಾವ್ ಯಾಕೆ ಸಮರ್ಥನೆಗೆ ನಿಂತಿದ್ದಾರೆ. ಇದರಲ್ಲಿ ಅವರ ವೈಯಕ್ತಿಕ ಆಸ್ತಕಿಯಾಕೇ ಎಂದು ಪ್ರಶ್ನಿಸಿದರು.
ಇದಕ್ಕೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್, ವಕ್ಫ್ ವಿಚಾರದಲ್ಲಿ ಸಂಬಂಧಪಟ್ಟ ಸಚಿವರೇ ಹೇಳಿಕೆ ನೀಡಬೇಕು ಎಂದೇನಿಲ್ಲ. ಸರಕಾರದ ಭಾಗವಾಗಿ ಯಾರು ಬೇಕಾದರೂ ಉತ್ತರಿಸಬಹುದು. ಯತ್ನಾಳ್ ತನ್ನ ಕೀಳುಮಟ್ಟದ ಹೇಳಿಕೆಗಳಿಂದಾಗಿಯೇ ಇವತ್ತು ನ್ಯಾಯಾಲಯದ ಎದುರು ನಿಲ್ಲುವಂತಾಗಿರುವುದು ಎಂದು ಹೇಳಿದರು.
ತಮ್ಮ ಬಾಯಿ ಚಪಲಕ್ಕೆ ಏನೇನೋ ಮಾತನಾಡುವುದಲ್ಲ. ಹಿರಿಯರಾಗಿ ಗಂಭೀರವಾಗಿ ಎಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಲಿ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.