ಬೆಳಗಾವಿ ಅಧಿವೇಶನ | ತಬಲಾ ವಾದಕ ಝಾಕಿರ್ ಹುಸೈನ್ ನಿಧನಕ್ಕೆ ಉಭಯ ಸದನಗಳಲ್ಲಿ ಸಂತಾಪ

ಬೆಳಗಾವಿ : ಅಂತರ್ ರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಉಸ್ತಾದ್ ಝಾಕಿರ್ ಹುಸೈನ್ ಹಾಗೂ ದೊಡ್ಡಬಳ್ಳಾಪುರ ಕ್ಷೇತ್ರದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ನಿಧನಕ್ಕೆ ಸೋಮವಾರ ವಿಧಾನ ಮಂಡಲದ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.
ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಮಾಜಿ ಶಾಸಕ ನರಸಿಂಹಸ್ವಾಮಿ ಹಾಗೂ ಝಾಕಿರ್ ಹುಸೈನ್ ನಿಧನದ ವಿಷಯವನ್ನು ಪ್ರಸ್ತಾಪಿಸಿ ಸಂತಾಪ ಸೂಚನೆ ನಿರ್ಣಯವನ್ನು ಮಂಡಿಸಿದರು.
ನರಸಿಂಹಸ್ವಾಮಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ 2004 ಹಾಗೂ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಬೆಂಗಳೂರು ಜಿಲ್ಲಾ ಪಂಚಾಯತ್ ಸದಸ್ಯ, ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಡಿ.15ರಂದು ಅವರು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಉಸ್ತಾದ್ ಝಾಕಿರ್ ಹುಸೈನ್ ಅವರು ಹಿಂದೂಸ್ಥಾನಿ, ಶಾಸ್ತ್ರೀಯ ಸಂಗೀತ ಮತ್ತು ಜಾಯ್ ಫ್ಯೂಷನ್ ಅಭ್ಯಾಸ ಮಾಡಿದ್ದರು. ತಬಲಾ ವಾದನದ ಜೊತೆಗೆ ಸಂಗೀತ ನಿರ್ದೇಶನ, ನಟನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂಗ್ಲೀಷ್ ಗಿಟಾರ್ ವಾದಕ ಜಾನ್ ಮೆಕ್ ಲಾಗ್ಸನ್, ಪಿಟೀಲು ವಾದಕ ಎಲ್.ಶಂಕರ್ ಮತ್ತು ತಾಳವಾದುಗಾರ ಟಿ.ಎಚ್.ವಿನಾಯಕರಾಮ್ ಅವರೊಂದಿಗೆ 1973ರಲ್ಲಿ ನಡೆಸಿಕೊಟ್ಟ ವಿಶಿಷ್ಟ ಯೋಜನೆ ಸಂಗೀತ ಕ್ಷೇತ್ರದಲ್ಲಿ ಅಪ್ರತಿಮವೆನಿಸಿತ್ತು.
ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಝಾಕಿರ್ ಹುಸೈನ್, 5 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಝಾಕಿರ್ ಹುಸೈನ್ ಡಿ.15ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಿಧನರಾದರು. ಸಂತಾಪ ಸೂಚಕ ನಿರ್ಣಯದ ಮೇಲೆ ವಿಧಾನಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿರು. ವಿಧಾನಪರಿಷತ್ತಿನಲ್ಲಿ ಸಭಾನಾಯಕ ಎನ್.ಎಸ್.ಭೋಸರಾಜು ಹಾಗೂ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು. ಮೃತರ ಗೌರವಾರ್ಥ ವಿಧಾನ ಸಭೆಯಲ್ಲಿ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು.