ಸಂಡೂರು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಬಿರುಸಿನ ಪ್ರಚಾರ : ಮೂರು ದಿನದಲ್ಲೇ 18 ಬಹಿರಂಗ ಸಭೆಗಳಲ್ಲಿ ಭಾಗಿ
ಸಿದ್ದರಾಮಯ್ಯ
ಬೆಂಗಳೂರು : ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇವಲ ಮೂರೇ ದಿನಗಳಲ್ಲಿ 18 ಬಹಿರಂಗ ಸಭೆಗಳಲ್ಲಿ ಭಾಗಿಯಾಗಿದ್ದು, ಕ್ಷೇತ್ರದ ಮತದಾರರನ್ನುದ್ದೇಶಿಸಿ ಭಾಷಣ ಮಾಡಿದ್ದು, ಅಬ್ಬರದ ಪ್ರಚಾರ ನಡೆಸಿ ಗಮನ ಸೆಳೆದಿದ್ದಾರೆ.
28 ಗ್ರಾಮ ಪಂಚಾಯ್ತಿ, 3 ಪುರಸಭೆ, 1 ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತಯಾಚನೆ ಮಾಡಿ ಮತದಾರರನ್ನು ನೇರವಾಗಿ ತಲುಪಿದ್ದಾರೆ. ಸಂಡೂರು ಕ್ಷೇತ್ರದ ಶೇ.70ರಷ್ಟು ಭೂ ಭಾಗದಲ್ಲಿ ಪ್ರಚಾರ ನಡೆಸಿದ್ದು, ಒಟ್ಟು 3 ದಿನಗಳಲ್ಲಿ ಅಂದಾಜು 320 ಕಿಲೋ ಮೀಟರ್ ಪ್ರಯಾಣಿಸಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಇದೇ ವೇಳೆ ರೈತರು ಮತ್ತು ಭೂಹೀನರು 652 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವರ ಅಹವಾಲು ಕೇಳಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ವಿವಿಧ ಕಾರಣಗಳಿಂದ ಮುನಿಸಿಕೊಂಡಿದ್ದ ನಾಲ್ಕು ಮಂದಿ ಸ್ಥಳೀಯ ನಾಯಕರ ಮನೆಗಳಿಗೆ ಭೇಟಿ ನೀಡಿ ಅವರ ಮನವೊಲಿಸಿ ತಮ್ಮ ಜೊತೆಯಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆಂದು ಗೊತ್ತಾಗಿದೆ.