ವಿಪಕ್ಷಗಳ ನಾಯಕರನ್ನು ಹೆದರಿಸಿ ಮೋದಿ ದರ್ಬಾರು ನಡೆಸುತ್ತಿದ್ದಾರೆ : ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ(PC:x/@siddaramaiah)
ಸಂಡೂರು : ವಿರೋಧ ಪಕ್ಷಗಳ ಜನ ನಾಯಕರನ್ನು ಸಿಬಿಐ, ಈಡಿ, ಐಟಿ ಹೆಸರಲ್ಲಿ ಹೆದರಿಸಿ, ಬೆದರಿಸಿ ಮೋದಿ ದರ್ಬಾರು ನಡೆಸುತ್ತಿದ್ದಾರೆ. ಬಿಜೆಪಿಯ ಬೆದರಿಕೆ, ಷಡ್ಯಂತ್ರ, ಕುತಂತ್ರಗಳಿಗೆ ಈ ಉಪ ಚುನಾವಣೆಯಲ್ಲಿ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಶುಕ್ರವಾರ ಸಂಡೂರು ವಿಧಾನಸಭಾ ಕ್ಷೇತ್ರದ ಕುಡುತಿನಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣಮ್ಮ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯಾಗಲಿ, ಬಿಜೆಪಿಯವರಾಗಲೀ ಒಂದೇ ಒಂದು ದಿನ ನಮ್ಮ ಜನರ ದಿನನಿತ್ಯದ ಸಮಸ್ಯೆಗಳ ಬಗ್ಗೆ ಮಾತಾಡೋದಿಲ್ಲ ಎಂದರು.
ಬೆಲೆ ಏರಿಕೆ, ನಿರುದ್ಯೋಗ, ರೂಪಾಯಿ ಮೌಲ್ಯ ಕುಸಿತ, ರೈತರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾತಾಡಿಲ್ಲ. ವಿದೇಶದಿಂದ ಕಪ್ಪು ಹಣ ತರಲಿಲ್ಲ. ನಿಮ್ಮ ಅಕೌಂಟಿಗೆ 15 ಲಕ್ಷ ರೂ. ಹಾಕಲಿಲ್ಲ. ಉದ್ಯೋಗ ಸೃಷ್ಟಿ ಮಾಡುವುದಿರಲಿ, ಇರುವ ಉದ್ಯೋಗಗಳೇ ಬಂದ್ ಆಗುವಂತೆ ಮಾಡಿದರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಕೇವಲ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿಬಿಐ, ಈಡಿ, ಐಟಿ ಉಪಯೋಗಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಹೆದರಿಸಿ, ಬೆದರಿಸಿಕೊಂಡು ತಮ್ಮ ಹುಳುಕುಗಳ ಬಗ್ಗೆ ಯಾರೂ ಮಾತನಾಡದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಇವರ ಯೋಗ್ಯತೆಗೆ ಸರಿಯಾದ ರಸ್ತೆ ಮಾಡಲಿಲ್ಲ. ಹೊಸ ರಸ್ತೆಗಳು ಮಾಡುವುದಿರಲಿ ರಸ್ತೆ ಗುಂಡಿಗಳನ್ನೂ ಸಮರ್ಪಕವಾಗಿ ಮುಚ್ಚಲಿಲ್ಲ ಎಂದು ಮುಖ್ಯಮಂತ್ರಿ ಕಿಡಿಗಾರಿದರು.
ಅತ್ಯಂತ ಹಿಂದುಳಿದ ತಾಲೂಕು ಎನ್ನುವ ಪಟ್ಟಿಯಲ್ಲಿದ್ದ ಸಂಡೂರನ್ನು ಪ್ರಗತಿಯ ಪಥದಲ್ಲಿ ದಾಪುಗಾಲು ಹಾಕುವಂತೆ ಮಾಡಿದ್ದು ಸಂತೋಷ್ ಲಾಡ್ ಮತ್ತು ಈ.ತುಕಾರಾಮ್. ಸಂಡೂರಿನ ಅಭಿವೃದ್ಧಿಯನ್ನು ತಲೆ ಮೇಲೆ ಹೊತ್ತುಕೊಂಡು ಹಗಲಿರುಳು ಕೆಲಸ ಮಾಡಿರುವ ಈ.ತುಕಾರಾಮ್ ಅವರ ಪತ್ನಿ ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದಂತೆ ಎಂದು ಸಿದ್ದರಾಮಯ್ಯ ಹೇಳಿದರು.
‘692 ದಿನಗಳ ರೈತರ ಹೋರಾಟಕ್ಕೆ ಸುಖಾಂತ್ಯ ಹಾಡೋಣ’ :
ಸಂಡೂರಿನ ಕುಡುತಿನಿಯಲ್ಲಿ ಕಳೆದ 692 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ 692 ದಿನಗಳ ಹೋರಾಟಕ್ಕೆ ಉಪ ಚುನಾವಣೆ ಮುಗಿಯುತ್ತಿದ್ದಂತೆ ಸುಖಾಂತ್ಯ ಹಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
2010 ರಲ್ಲಿ ರೈತರ ಗಮನಕ್ಕೆ ಬಾರದಂತೆ ಜಮೀನು ಸ್ವಾಧೀನ ಪಡಿಸಿಕೊಂಡು ಆಗಿನ ಬಿಜೆಪಿ ಸರಕಾರ ರೈತ ಕುಟುಂಬಗಳ ಬಾಯಿಗೆ ಮಣ್ಣು ಹಾಕಿದೆ ಎಂದು ಪ್ರತಿಭಟನಾಕಾರರು ದೂರಿದರು. ಪ್ರತಿಭಟನಾ ನಿರತ ರೈತರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದ ಮುಖ್ಯಮಂತ್ರಿ, ಸಂಸದ ಈ.ತುಕಾರಾಮ್ ನಿಮ್ಮ ಸಮಸ್ಯೆಗಳನ್ನೆಲ್ಲಾ ವಿವರಿಸಿ ಮನವಿ ನೀಡಿದ್ದಾರೆ. ಅದರಂತೆ, ವಿಶೇಷ ಸಭೆ ಕರೆಯಲು ಸೂಚಿಸಿದ್ದೇನೆ ಎಂದು ಹೇಳಿದರು.
ಚುನಾವಣೆ ಮುಗಿಯುತ್ತಿದ್ದಂತೆ ಸಭೆ ಕರೆಯುತ್ತೇನೆ. ಕೆಐಎಡಿಬಿ ಸೇರಿ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಭೆ ಕರೆದು ಚರ್ಚಿಸೋಣ. ಪರಿಹಾರ ಕಂಡುಕೊಳ್ಳೋಣ. ನಮ್ಮ ಸರಕಾರ ರೈತರ ಹಿತ ಕಾಯಲು ಏನೇನು ಮಾಡಬೇಕೋ, ಎಲ್ಲವನ್ನೂ ಮಾಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.