ಜಾತಿ-ಧರ್ಮದ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವವರು ಧರ್ಮದ್ರೋಹಿಗಳು : ಸಿಎಂ ಸಿದ್ದರಾಮಯ್ಯ
PC : X
ಬಳ್ಳಾರಿ : ಜಾತಿ, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವಂತಹ ಮನುಷ್ಯ ದ್ವೇಷಿ ಧರ್ಮ ದ್ರೋಹಿಗಳ ಬಗ್ಗೆ ಎಚ್ಚರ ಇರಲಿ. ಭಾರತ ಬಹುತ್ವದ ದೇಶ. ಸರ್ವ ಧರ್ಮ ಸಮನ್ವಯ ಭಾರತ ಮಣ್ಣಿನ ಗುಣ. ಇದನ್ನು ಕಾಪಾಡುವುದೇ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಬುಧವಾರ ಬಳ್ಳಾರಿ ಆರೋಗ್ಯ ಮಾತೆ ಧರ್ಮ ಕ್ಷೇತ್ರದ ಅಮೃತ ಮಹೋತ್ಸವವನ್ನು ಉದ್ಘಾಟಿಸಿ, ಬಡ ಕುಟುಂಬಗಳಿಗೆ ಧರ್ಮ ಸಂಸ್ಥೆ ನೀಡಿದ ಉಚಿತ ಮನೆಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಯಾವ ಧರ್ಮವೂ ದ್ವೇಷವನ್ನು ಬೋಧನೆ ಮಾಡುವುದಿಲ್ಲ. ಪ್ರೀತಿ, ಮಾನವೀಯತೆ ಎಲ್ಲ ಧರ್ಮಗಳ ಸಾರ. ಧರ್ಮದ ಅರ್ಥ ಬಹಳ ಸರಳ. ಬಸವಣ್ಣನವರು ಹೇಳಿರುವಂತೆ ದಯೆಯೇ ಧರ್ಮದ ಮೂಲ. ದ್ವೇಷ ಅಸೂಯೆ ಇದ್ದ ಕಡೆ ಧರ್ಮ ಇರುವುದಿಲ್ಲ. ದ್ವೇಷದಿಂದ ಸಮಾಜ ಛಿದ್ರವಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ನಮ್ಮ ಧರ್ಮವನ್ನು ಪಾಲಿಸೋಣ. ಎಲ್ಲ ಧರ್ಮಗಳನ್ನೂ ಸಹಿಸಿಕೊಳ್ಳುವ ಸಹಿಷ್ಣುತೆ ಬೆಳೆಸಿಕೊಳ್ಳಿ ಎನ್ನುವುದೇ ನಮ್ಮ ಸಂವಿಧಾನದ ಮಹಾನ್ ಮೌಲ್ಯ. ಇದನ್ನು ಪಾಲಿಸುವುದೇ ನಾವು ಸ್ವಾಮಿ ವಿವೇಕಾನಂದರಿಗೆ, ಸಂವಿಧಾನಕ್ಕೆ ನೀಡುವ ಮಹೋನ್ನತ ಗೌರವ. ನಾನು ಯಾವುದೇ ಒಂದು ಧರ್ಮವನ್ನು ಓಲೈಸುವುದಿಲ್ಲ. ನಾನು ಹಿಂದುಗಳನ್ನು ಪ್ರೀತಿಸುವಂತೆಯೇ ಕ್ರೈಸ್ತ, ಮುಸ್ಲಿಮ್, ಜೈನ, ಬೌದ್ಧ ಧರ್ಮದವರೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ಮುಖ್ಯಮಂತ್ರಿ ವಿವರಿಸಿದರು.
ಹಿಂದುಳಿದವರು, ಅಲ್ಪಸಂಖ್ಯಾತರು, ಶೂದ್ರರು, ದಲಿತರು ಮತ್ತು ಇಡೀ ಮಹಿಳಾ ಕುಲವನ್ನು ಈ ಜಾತಿ ವ್ಯವಸ್ಥೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿತ್ತು. ಆದರೆ, ನಮ್ಮ ಸಂವಿಧಾನ ಇವರೆಲ್ಲರನ್ನೂ ಜಾತಿ ಸಂಕೋಲೆಯಿಂದ ಬಿಡುಗಡೆಗೊಳಿಸಿ ಶಿಕ್ಷಣ ಒದಗಿಸಿತು ಎಂದು ಸಿದ್ದರಾಮಯ್ಯ ಹೇಳಿದರು.
ನಾನು ವೀರಮಕ್ಕಳ ಕುಣಿತಕ್ಕೆ ಸೇರಿ ಶಿಕ್ಷಣದಿಂದ ವಂಚಿತನಾಗಿದ್ದೆ. ಆದರೆ ನಮ್ಮ ಸಂವಿಧಾನ ಮತ್ತು ಒಬ್ಬ ಗುರುಗಳ ಕಾರಣದಿಂದ ನಾನು ನೇರವಾಗಿ ಐದನೇ ತರಗತಿಯಿಂದ ಶಿಕ್ಷಣ ಪಡೆದೆ. ಪರಿಣಾಮ ನಾನು ಎರಡೆರಡು ಬಾರಿ ಮುಖ್ಯಮಂತ್ರಿ ಆದೆ ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.
ಬಸವಣ್ಣನವರು 850 ವರ್ಷಗಳ ಹಿಂದೆ ‘ಇವನಾರವ ಎನ್ನಬೇಡಿ, ಇವ ನಮ್ಮವ ಎನ್ನಿ’ ಎಂದು ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಆದರೆ, ಇವತ್ತಿಗೂ ಜಾತಿ ಹೋಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಕ್ರೈಸ್ತ ಧರ್ಮ ಗುರುಗಳು, ಕ್ರೈಸ್ತ ಸಂಸ್ಥೆಗಳು ಎಲ್ಲ ಧರ್ಮದ, ಎಲ್ಲ ಜಾತಿಯ ಬಡವರಿಗೂ ಶಿಕ್ಷಣ ಕೊಡುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ. ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣ ಸಿಕ್ಕಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಸಂವಿಧಾನ ಅಂಗೀಕಾರ ಸಭೆಯಲ್ಲಿ ಮಾಡಿದ ಭಾಷಣವನ್ನು ಪ್ರತಿಯೊಬ್ಬರೂ ಓದಿಕೊಳ್ಳಬೇಕು. ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ, ಇಂಧನ ಸಚಿವ ಕೆ.ಜೆ. ಜಾರ್ಜ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ನಾರಾ ಭರತ್ ರೆಡ್ಡಿ, ಬಿ.ನಾಗೇಂದ್ರ, ಅನ್ನಪೂರ್ಣ ತುಕಾರಾಮ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.