ಡಿಸೆಂಬರ್ನಲ್ಲಿ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ್ ಜೋಶಿ
ಮಹೇಶ್ ಜೋಶಿ
ಬಳ್ಳಾರಿ: ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಹೇಳಿದ್ದಾರೆ.
ಮಂಗಳವಾರ ಬಳ್ಳಾರಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಕನ್ನಡದ ಅಸ್ಮಿತೆ ತೋರಿದ ಜಿಲ್ಲೆಯಾಗಿದೆ. ಸಾಂಸ್ಕೃತಿಕವಾಗಿ ಬಳ್ಳಾರಿ ಮತ್ತು ವಿಜಯನಗರ ಒಂದೇ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಈವರೆಗೆ ನಾಲ್ಕು ಬಾರಿ ಸಾಹಿತ್ಯ ಸಮ್ಮೇಳನ ನಡೆದಿದೆ. 67 ವರ್ಷಗಳ ಬಳಿಕ ನಡೆಯುತ್ತಿರುವ ಈ ಸಮ್ಮೇಳನವು ಸರ್ಕಾರ, ಜಿಲ್ಲಾಡಳಿತ, ಪರಿಷತ್ತುಗಳ ಸಮನ್ವಯದೊಂದಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳೆರಡೂ ಒಟ್ಟುಗೂಡಿ ನಡೆಸಲಿವೆ’ ಎಂದು ಹೇಳಿದರು.
‘ಬಳ್ಳಾರಿಯಲ್ಲಿ ಬಿಸಿಲು ಜಾಸ್ತಿ. ಇಲ್ಲಿನ ಹವಾಗುಣ ನೋಡಿಕೊಂಡು ಡಿಸೆಂಬರ್ನಲ್ಲಿ ಮೂರು ದಿನಗಳ ಸಮ್ಮೇಳನ ಆಯೋಜಿಸಲಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರೊಂದಿಗೆ ಚರ್ಚಿಸಿ ಸಮ್ಮೇಳನದ ದಿನಾಂಕ ನಿರ್ಧರಿಸಲಾಗುವುದು’ ಎಂದರು.
‘ಹಾವೇರಿ ಸಮ್ಮೇಳನಕ್ಕೆ ಕನ್ನಡ-ಇಂಗ್ಲಿಷ್ ನಿಘಂಟು ವಿದ್ವಾಂಸ ಫರ್ಡಿನಾಂಡ್ ಕಿಟೆಲ್ ಮೊಮ್ಮಗಳನ್ನು ಆಹ್ವಾನಿಸಲಾಗಿತ್ತು. ಮಂಡ್ಯದಲ್ಲಿ ನಡೆದ ಸಮ್ಮೇಳನಕ್ಕೆ ಸಾಹಿತಿಗಳ ಕುಟುಂಬಸ್ಥರನ್ನು ಆಹ್ವಾನಿಸಿ ಸನ್ಮಾನಿಸಲಾಗಿತ್ತು. ಬಳ್ಳಾರಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಇಲ್ಲಿನ ಮೊದಲ ಜಿಲ್ಲಾಧಿಕಾರಿ ಸರ್ ಥಾಮಸ್ ಮನ್ರೋ ಅವರ ಕುಟುಂಬಸ್ಥರನ್ನು ಆಹ್ವಾನಿಸಲಾಗುವುದು’ ಎಂದು ಅವರು ತಿಳಿಸಿದರು.
ಈಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮತ್ತಿತರರು ಇದ್ದರು.